ಅಸ್ತಿಭಾರ (ಅಡಿಪಾಯ)

	ಮನೆ, ಸೇತುವೆ, ನೀರಾವರಿ ಕಟ್ಟೆ ಮುಂತಾದ ಕಟ್ಟಡಗಳ (ಸ್ಟ್ರಕ್‍ಚರ್ಸ) ಭಾರವನ್ನು ತಳದ ವಸ್ತುಗಳಿಗೆ (ನೆಲ, ಕಲ್ಲು) ವರ್ಗಾಯಿಸುವ ಮತ್ತು ಆಯಾ ಕಟ್ಟಡಗಳ ಅಂಗವಾಗಿರುವ ರಚನೆ (ಪೌಂಡೇಷನ್). ತಳಪಾಯವೆಂದೂ ಹೆಸರಿದೆ. ಕಟ್ಟಡದ ರಚನೆ ಅಸ್ತಿಭಾರದಿಂದ ತೊಡಗಿ ಮೇಲಕ್ಕೂ ಮುಂದುವರಿಯುವುದು; ಆದರೆ ಕಟ್ಟಡದ ಸಂವಿಧಾನವನ್ನು (ಡಿಸೆóೈನ್) ಮೇಲಿನಿಂದ ಅದರ ಭಾಗಗಳ ಮೇಲೆ ಬರುವ ಭಾರವನ್ನು ಧಾರಾಳವಾಗಿ ಹೊರುವಷ್ಟು ಭದ್ರವಾಗಿ ಮಾಡಬೇಕು. ಅಸ್ತಿಭಾರ ಈ ಎಲ್ಲ ಹೊರೆಗಳನ್ನು ಹೊರುವಂತಿರಬೇಕು.

	ಅಸ್ತಿಭಾರದ ಮೇಲೆ ಬೀಳುವ ಭಾರವನ್ನು ನಿಶ್ಚಲ ಭಾರ (ಲೈಡ್‍ಲೋಡ್) ಮತ್ತು ಚಲ ಭಾರ (ಲಿವ್‍ಲೋಡ್) ಎಂದು ಎರಡು ಭಾಗ ಮಾಡಬಹುದು. ಒಂದು ಸೇತುವೆಯ ಕಲ್ಲಿನ ಕಂಬಗಳು ಮತ್ತು ಕಮಾನಿನ ಭಾರ ನಿಶ್ಚಲ. ಅದರ ಮೇಲೆ ಓಡಾಡುವ ಜನರ ಮತ್ತು ವಾಹನಗಳ ಭಾರ ಚಲ. ಇವುಗಳಲ್ಲಿ ನಿಶ್ಚಲ ಭಾರವನ್ನು ಸುಲಭವಾಗಿ ಲೆಕ್ಕ ಹಾಕಬಹುದು. ಆದರೆ ಚಲ ಭಾರ ಕಟ್ಟಡದ ಉಪಯೋಗಕ್ಕೆ ಅನುಸಾರವಾಗಿ ಕಾಲಕಾಲಕ್ಕೂ ವ್ಯತ್ಯಾಸವಾಗುತ್ತದೆ. ಗಾಳಿಯ ಹೊಡೆತ, ಮಂಜು ಇವು ಕೆಲವು ಕಾಲಗಳಲ್ಲಿ ಇರುವುದೇ ಇಲ್ಲ. ಇನ್ನು ಕೆಲವುಕಾಲಗಳಲ್ಲಿ ಪರಮಾವಧಿಯನ್ನು ಮುಟ್ಟುತ್ತವೆ. ಸೇತುವೆಗಳ ಮೇಲೆ ತಿರುಗಾಡುವ ಜನ ಮತ್ತು ವಾಹನಗಳ ಭಾರ ಅನಿಶ್ಚಿತವಾಗಿ ಕಾಲ ಕಾಲಕ್ಕೂ ಬದಲಾಗುತ್ತದೆ. 

	ಒಂದು ಕಟ್ಟಡದಲ್ಲಿ ಭೂಮಿಯ ಮಟ್ಟದ ಕೆಳಗಿರುವ ಕಲ್ಲುಕಟ್ಟಡವನ್ನೂ ಬುಡದ ಕಾಂಕ್ರೀಟನ್ನೂ ಇವು ನಿಂತಿರುವ ನೈಸರ್ಗಿಕವಾದ ಕಲ್ಲು ಇಲ್ಲವೆ ಮಣ್ಣನ್ನೂ ಎರಡನ್ನೂ ರೂಢಿಯಲ್ಲಿ ಅಸ್ತಿಭಾರವೆಂದೇ ಕರೆಯುತ್ತಾರೆ. ಅಸ್ತಿಭಾರದಕಟ್ಟಡ ಮೇಲುಕಟ್ಟಡದ ಭಾರವನ್ನು ನೆಲದ ಇಲ್ಲವೆ ಹೊಳೆಯ ತಳದಕೆಳಗಡೆ ಮೇಲಿನ ಭಾರವನ್ನೆಲ್ಲಾ ವಿಕಾರವಾಗದೆ ಹೊರಬಲ್ಲ ಸಸ್ತಿಭಾರಕ್ಕೆ ಸಾಗಿಸುತ್ತವೆ. ಎಲ್ಲ ಅಸ್ತಿ ಭಾರಗಳಿಗೂ ಒಂದೇ ವಿಧವಾಗಿ ಭಾರವನ್ನು ಹೊರುವ ಸಾವಥ್ರ್ಯವಿರುವುದಿಲ್ಲ. ಭಾರ ಅದರ ಮೇಲೆ ಬಿದ್ದಾಗ ಗಟ್ಟಿಬಂಡೆಯ ಹೊರತು ಉಳಿದ ಅಸ್ತಿಭಾರಗಳೆಲ್ಲ ಹೆಚ್ಚಾಗಿಯೋ ಕಡಿಮೆಯಾಗಿಯೋ ಕುಗ್ಗುತ್ತವೆ. ಒಂದೊಂದು ಅಸ್ತಿಭಾರವೂ ಅದು ಕುಗ್ಗದ ಹಾಗೆ ಹೊರಬಹುದಾದ ಒತ್ತಡದಲ್ಲಿ ಮೇಲಿನ ಭಾರವನ್ನು ಸಾಗಿಸುವುದೇ ಅಸ್ತಿಭಾರದ ಉದ್ದೇಶ. 

	ಅಸ್ತಿಭಾರದ ಕಟ್ಟಡಗಳನ್ನು ಹರಡಿದ ಅಸ್ತಿಭಾರಗಳುಳ್ಳವು ಮತ್ತು ಆಳವಾದ ಅಸ್ತಿ ಭಾರಗಳುಳ್ಳವು ಎಂದು ವಿಂಗಡಿಸಬಹುದು. ಹರಡಿದ ಅಸ್ತಿಭಾರಗಳು ಭೂಮಿಯ ಮಟ್ಟದಿಂದ ಬಹಳ ಆಳವಾಗಿರುವುದಿಲ್ಲ. ಅಸ್ತಿಭಾರ ಒಂದು ಚದರಮೀಟರಿನ ಮೇಲೆ ಸುರಕ್ಷಿತವಾಗಿ ಹೊರಬಹುದಾದ ಭಾರಕ್ಕೆ ಅನುಗುಣವಾಗಿರುತ್ತದೆ. ಆಳವಾದ ಅಸ್ತಿಭಾರಗಳಲ್ಲಿ ಚದರ ಅಳತೆ ಕಡಿಮೆ. ಒಂದು ಚದರಮೀಟರ್ ಮೇಲೆ ಹೆಚ್ಚಿಗೆ ಭಾರವನ್ನು ಹೊರಬಲ್ಲ ಸಿಮೆಂಟ್‍ಕಾಂಕ್ರೀಟ್ ಮೊದಲಾದ ಸಾಮಾಗ್ರಿಗಳನ್ನು ಉಪಯೋಗಿಸಿ ಹೆಚ್ಚಿಗೆ ತಡೆಯುವಂತೆ ಮಾಡುತ್ತಾರೆ. ಗ್ರಿಲ್ಲೇಜ್ ಅಸ್ತಿ ಭಾರಗಳಲ್ಲಿ ಅಸ್ತಿಭಾರದ ಕಾಂಕ್ರೀಟಿನಲ್ಲಿ ಉಕ್ಕಿನ ಗರ್ಡರುಗಳನ್ನು ಹುದುಗಿಸಿರುತ್ತಾರೆ. ಆಗ ಕಾಂಕ್ರೀಟಿನ ದಪ್ಪವನ್ನು ಕಡಿಮೆಮಾಡಬಹುದು. ಅಥವಾ ಉಕ್ಕಿನ ಗರ್ಡರುಗಳನ್ನು ಎರಡು ವರಸೆಗಳಲ್ಲಿ ಒಂದರ ಕೆಳಗೆ ಇನ್ನೊಂದು ವರಸೆಯನ್ನು ಸಮಕೋನವಾಗಿಟ್ಟು ಎಲ್ಲವನ್ನೂ ಸಿಮೆಂಟ್ ಕಾಂಕ್ರೀಟಿನಿಂದ ಮುಚ್ಚಬಹುದು. ಉಕ್ಕಿನ ಗ್ರಿಲ್ಲೇಜಿಗೆ ಬದಲಾಗಿ ಪ್ರಬಲಿತ ಕಾಂಕ್ರೀಟನ್ನು ಹಾಕಬಹುದು. ಬಗೆಬಗೆಯ ದಸಿಗಳನ್ನು (ಪೈಲ್ಸ್) ನೆಲದಲ್ಲಿ ಹೂಳಬಹುದು. ಅಸ್ತಿಭಾರದ ಮಟ್ಟಗಳಲ್ಲಿ ಅಗಲದಲ್ಲಿ ಬದಲಾವಣೆಗಳನ್ನು ಮೆಟ್ಟಲು ಮೆಟ್ಟಲಾಗಿ ಮಾಡಬೇಕು. 

	ಅಸ್ತಿಭಾರಗಳನ್ನು ವ್ಯವಹಾರಿಕವಾಗಿ ಕೆಳಗೆಕಂಡಂತೆ ವರ್ಗೀಕರಣ ಮಾಡಬಹುದು :-

	1. ಬಂಡೆ : ಕೆಲವು ಪ್ರದೇಶಗಳಲ್ಲಿ ಕಲ್ಲುಬಂಡೆಗಳು ನೆಲದಮೇಲೆ ಎದ್ದು ಕಾಣುತ್ತವೆ. ಇನ್ನು ಕೆಲವು ಕಡೆ ಕೊಂಚ ಆಳವಾಗಿ ಅಗೆದಾಗ ಕಲ್ಲು ಸಿಕ್ಕಬಹುದು. ಗಟ್ಟಿಯಾದ ಬಂಡೆಗಿಂತ ಉತ್ತಮವಾದ ಅಸ್ತಿಭಾರ ಇನ್ನೊಂದಿಲ್ಲ. ಅಗ್ನಿಶಿಲೆಗಳು, ದಪ್ಪವಾದ ಸುಣ್ಣಕಲ್ಲು ಮತ್ತು ಮರಳುಕಲ್ಲು ಚದರಡಿಗೆ 15 ಟನ್ ಭಾರವನ್ನು ಧಾರಾಳವಾಗಿ ಹೊರಬಲ್ಲವು. ಆದರೆ ಮೆದುವಾದ ಕಲ್ಲಿನ ಮೇಲೆ 8 ಟನ್ನಿನ ಮೇಲೆ ಭಾರವನ್ನು ಹಾಕತಕ್ಕದ್ದಲ್ಲ. ಕಲ್ಲುಬಂಡೆಯೇ ಶಿಥಿಲವಾಗಿ ಗ್ರ್ಯಾವೆಲ್, ಮರಳು, ಮಣ್ಣು, ಗೋಡು-ಇತ್ಯಾದಿ ಪ್ರಭೇದಗಳಾಗುತ್ತದೆ. 

	2. ಗ್ರಾವೆಲ್ : ಇದು ನೀರಿನಲ್ಲಿ ನವೆದುಹೋದ ಬಂಡೆಯ ಪುಡಿ. ಇದರ ಅಳತೆಯಲ್ಲಿ ಹೆಚ್ಚಿನ ವ್ಯತ್ಯಾಸಗಳಿರುತ್ತವೆ. ಒತ್ತಾಗಿ ಒಟ್ಟುಗೂಡಿದ ಗ್ರ್ಯಾವೆಲ್ ಭದ್ರವಾದ ತಳದ ಮೇಲೆ ಇದ್ದರೆ ಚದರ ಅಡಿಗೆ 4 ಟನ್ ಭಾರವನ್ನು ತಡೆಯಬಲ್ಲದು.

	3. ಮರಳು : ಆರು ಮಿ.ಮೀಗೂ ಕಡಿಮೆ ಅಳತೆಯ ಸಣ್ಣ ಕಲ್ಲಿನ ಕಣಗಳಿಗೆ ಮರಳು ಎನ್ನುತ್ತಾರೆ. ಮರಳಿನ ಅಸ್ತಿಭಾರ ಹರಿಯುವ ನೀರಿನಲ್ಲಿ ನಿಲ್ಲಬೇಕಾದರೆ ಅದು ಪಕ್ಕದಲ್ಲಿ ಜಾರಿಹೋಗದ ಹಾಗೆ ರಕ್ಷಣೆ ಬೇಕು. ಯಾವ ದಿಕ್ಕಿನಲ್ಲಿಯೂ ಹೊರಕ್ಕೆ ಹೋಗದ ಹಾಗೆ ನಿರ್ಬಂಧಿತವಾಗಿರುವ ಮರಳು ಚದರ ಅಡಿಗೆ 2 ರಿಂದ 4 ಟನ್ ಭಾರವನ್ನೂ ಹೊರಬಲ್ಲದು. 

	4. ಮಣ್ಣು : ಇದರ ಗುಣಗಳು ಮಣ್ಣಿನ ರಚನೆಗೆ ಅನುಗುಣವಾಗಿರುತ್ತವೆ. ಜೇಡಿಮಣ್ಣು ಜಿಗುಟಾಗಿರುತ್ತದೆ. ಮರಳು ಜಿಗುಟನ್ನು ತಗ್ಗಿಸುತ್ತದೆ. ನೀರು ಬಿದ್ದಾಗ ಅದು ಮೇಣದ ಹಾಗಾಗುತ್ತದೆ. ಜಿಗುಟು ವ್ಯತ್ಯಾಸವಾದ ಹಾಗೆ ಅದರ ಸಲೆ ಅಳತೆಯೂ ವ್ಯತ್ಯಾಸವಾಗುತ್ತದೆ. ಅದಕ್ಕಾಗಿ ಜಿಗುಟು ಮಣ್ಣಿನ ತೇವವನ್ನು ಒಂದೇ ತಗ್ಗಿನ ಮಟ್ಟದಲ್ಲಿಡಬೇಕು. ಅದಕ್ಕೆ ನೀರಿನ ಸಂಪರ್ಕವಿರಲೇಬಾರದು. ಇರಬಹುದಾದ ನೀರನ್ನು ಕಾಲುವೆಯ ಮೂಲಕ ಹೊರಕ್ಕೆ ಸಾಗಿಸಬೇಕು. ಈ ಅಸ್ತಿಭಾರಗಳು ನೆಲಮಟ್ಟದಿಂದ 1.20ಮೀ ಆಳದಲ್ಲಿರಬೇಕು. ಮಣ್ಣಿನ ಅಸ್ತಿಭಾರದ ಮೇಲೆ ಚದರಡಿಗೆ 2 ಟನ್ನುಗಳಿಗಿಂತ ಹೆಚ್ಚಿನ ಭಾರವನ್ನು ಹಾಕತಕ್ಕದ್ದಲ್ಲ.

	5. ಗೋಡು : (ಸಿಲ್ಟ್) ಹಿಂದೆ ಯಾವಾಗಲೋ ಅಗೆದ ಗುಂಡಿಗಳನ್ನು ತುಂಬಿದಾಗ ಅನೇಕ ವರ್ಷಗಳವರೆಗೂ ತುಂಬಿದ ಮಣ್ಣು ಕುಗ್ಗುತ್ತಲೇ ಇರುತ್ತದೆ. ಅಂಥ ಕಡೆಗಳಲ್ಲಿ ಕಟ್ಟುವಾಗ ಹಳೆಯ ನೆಲದ ಮಟ್ಟದವರೆಗೂ ಅಗೆಯಬೇಕು. ತಗ್ಗಾಗಿರುವ ಮೆದುವಾಗಿರುವ ಮಣ್ಣಿನ ಮೇಲೆ ಭಾರವನ್ನು ಒಂದೇ ಸಮವಾಗಿ ಹರಡುವ ಹಾಗೆ ಮರದ ಅಥವಾ ಪ್ರಬಲಿತ ಕಾಂಕ್ರೀಟಿನ ತೆಪ್ಪಗಳನ್ನು (ರ್ಯಾಫ್ಟ್) ಕಟ್ಟಬೇಕಾಗುತ್ತದೆ. ಆಗ ತೆಪ್ಪದ ಕೆಳಗಿನ ಮಣ್ಣು ಒಂದೇ ಸಮವಾಗಿ ಕೊಂಚವೇ ಕುಗ್ಗುತ್ತದೆ. 

	ಈ ಸಾಮಾಗ್ರಿಗಳು ಬೆರೆದಿರುವ ಅಸ್ತಿಭಾರಗಳಲ್ಲಿ ಕಟ್ಟಡದ ಸ್ವಭಾವ ಮತ್ತು ತಳಪಾಯದ ಮೇಲೆ ಬೀಳುವ ಭಾರ-ಇವನ್ನು ನೋಡಿ ನಿರ್ಣಯಿಸಬೇಕು.

	ಕೆಲವು ಅಸ್ತಿಭಾರಗಳಿಗೆ ಪಕ್ಕಗಳಲ್ಲಿ ಆಶ್ರಯಬೇಕಾಗಬಹುದು. ಮಣ್ಣು ಮತ್ತು ಮೆದುವಾದ ಕಲ್ಲು ಲಂಬವಾಗಿ ನಿಂತರೆ ಶಿಥಿಲವಾಗುತ್ತವೆ. ಆಸರೆಗೋಡೆಗಳನ್ನು (ರಿಟೆಯ್‍ನಿಂಗ್ ವಾಲ್ಸ್) ಕಟ್ಟಿ ಇದನ್ನು ರಕ್ಷಿಸಬೇಕು. ನೆಲದ ಅಡಿಯಲ್ಲಿರುವ ನೀರಿನ ಪ್ರವಾಹಗಳನ್ನು ಕೆಳಗಾಲುವೆಗಳಲ್ಲಿ ಸಾಗಿಸಬೇಕು. ಅಂತರ್ಜಲದ ಮಟ್ಟ ಏರುತ್ತಲೂ ಇಳಿಯುತ್ತಲೂ ಇರುವ ಕಡೆಗಳಲ್ಲಿ ನೆಲಮಾಳಿಗೆಗಳನ್ನು ಹೊರಗಿನ ನೀರಿನ ಒತ್ತಡವನ್ನು ತಡೆಯುವಂತೆಯೂ ನೀರು ಒಳಗೆ ನುಗ್ಗದಂತೆಯೂ ಕಲ್ಲಿನ ಗೋಡೆಗಳನ್ನು ಕಟ್ಟಬೇಕು.

	ಅಸ್ತಿಭಾರದ ಸಾಮಥ್ರ್ಯ : ಮುಖ್ಯವಾದ ಕಟ್ಟಡವೊಂದರ ಅಸ್ತಿಭಾರವನ್ನು ನಿರ್ಣಯಿಸುವುದಕ್ಕೆ ಮುಂಚೆ ಆ ಜಾಗದಲ್ಲಿ ಒಂದು ಪ್ರಾಯೋಗಿಕಗುಂಡಿಯನ್ನು (ಟ್ರಯಲ್‍ಪಿಟ್) ತೋಡಿಯೋ ಯಂತ್ರಗಳಿಂದ ಆಳವಾಗಿ ಕೊರೆದೋ ಒಳಗಿನ ಸಾಮಾಗ್ರಿಯನ್ನು ಹೊರಕ್ಕೆ ತಂದು ಪರಿಶೀಲಿಸಬೇಕು. ಅನುಭವದಿಂದಲೂ ಪ್ರಯೋಗಗಳಿಂದಲೂ ಅಸ್ತಿಭಾರ ಚದರ ಮೀಟರಿಗೆ ಎಷ್ಟು ಭಾರವನ್ನು ಹೊರಬಲ್ಲದೆಂದು ಗೊತ್ತುಮಾಡಬೇಕು.

	ಕಟ್ಟಡಗಳ ಅಸ್ತಿಭಾರಗಳು : ಈಗಿನ ಕಟ್ಟಡಗಳ ಅಸ್ತಿಭಾರದಲ್ಲಿ ಕಾಂಕ್ರೀಟನ್ನು ಹಾಕುವುದೇ ರೂಢಿ. ಕಟ್ಟಡದ ಮತ್ತು ಅದರ ಒಳಗಡೆ ಇರುವ ಯಂತ್ರ ಮೊದಲಾದುವುಗಳ ಭಾರವನ್ನು ಹೊರುವ ಹಾಗೂ ಕಟ್ಟಡಕ್ಕೆ ಎದುರಾಗಿ ಬೀಸುವ ಗಾಳಿಯ ಬಲವನ್ನು ತಡೆಯುವಂತೆಯೂ ಇರುವಷ್ಟು ಗಟ್ಟಿಯಾದ ಮಣ್ಣು ಇಲ್ಲವೆ ಬಂಡೆ ಸಿಕ್ಕುವವರಗೂ ಅಸ್ತಿಭಾರವನ್ನು ಇಳಿಸಬೇಕು. ಅಸ್ತಿಭಾರದ ಸ್ವಭಾವವನ್ನು ಪರಿಶೀಲಿಸಿ ಅದು ಸುರಕ್ಷಿತವಾಗಿ ಚದರ ಮೀಟಿರಿನ ಮೇಲೆ ಎಷ್ಟು ಭಾರವನ್ನು ಹೊರಬಲ್ಲುದು ಎಂದು ಲೆಕ್ಕ ಹಾಕಬೇಕು. ಏಕಂದರೆ ಇದಕ್ಕಿಂತ ಹೆಚ್ಚಿನ ಭಾರ ಮೇಲೆ ಬಿದ್ದರೆ ನೆಲ ಕುಗ್ಗಿ, ಕಟ್ಟಡದ ಗೋಡೆಗಳಲ್ಲಿ ಬಿರುಕುಗಳು ಕಾಣಿಸಿಕೊಳ್ಳುತ್ತವೆ.

	ಭಾರಗಳು : ಕಟ್ಟಡದ ಭಾರವನ್ನು ಎಲ್ಲ ಗೋಡೆಗಳೂ ಕಂಬಗಳೂ ಹೊರಬೇಕು. ಅದಕ್ಕಾಗಿ ಪ್ರತಿಯೊಂದು ಭಾಗವೂ ಅದರಮೇಲೆ ಬರುವಷ್ಟು ಭಾರವನ್ನು ತಡೆಯುವಷ್ಟು ಬಲವಾಗಿರಬೇಕು. ಕಟ್ಟಡಗಳ ಮೇಲೆ ಬರುವ ಭಾರಗಳು ಮೂರು ಬಗೆಯಾಗಿರುತ್ತವೆ.

	1 ಕಟ್ಟಡದ ಭಾರ ನಿಶ್ಚಲ ಭಾರ : ಈ ಭಾಗಗಳ ಪ್ರಮಾಣವೆಷ್ಟು, ಹೇಗೆ ಹಂಚಿರುತ್ತವೆ. ಕಟ್ಟಡದ ಒಂದೊಂದು ಭಾಗದ ಮೇಲೂ ಯಾವ ಪರಿಣಾಮವನ್ನುಂಟುಮಾಡುತ್ತವೆ ಎಂದು ಇಂಜಿನಿಯರು ಲೆಕ್ಕ ಹಾಕಬೇಕು. 

	2 ಕಟ್ಟಡದ ಒಳಗಡೆ ಇರತಕ್ಕ ಕುರ್ಚಿ, ಮೇಜು, ಯಂತ್ರ, ತಿರುಗಾಡುವ ಜನ, ಪಾಠಶಾಲೆಗಳಲ್ಲಿ ಹುಡಗರ ಭಾರ, ಮಳಿಗೆಗಳಲ್ಲಿ ತುಂಬಿರುವ ಸಾಮಾನು, ಕಾರಖಾನೆಗಳಲ್ಲಿ ಯಂತ್ರಗಳು-ಇವುಗಳ ಭಾರ ಚಲಭಾರ. ಯಂತ್ರಾಲಯಗಳಲ್ಲಿ ತಿರುಗುತ್ತಿರುವ ಯಂತ್ರಗಳ ಕಂಪನವೇ (ವೈಬ್ರೇಷನ್) ಈ ಭಾರದ ಬಹುಭಾಗವಾಗುತ್ತದೆ. ಗಡಂಗುಗಳಲ್ಲಿ ಒಂದೊಂದು ಮಹಡಿಯಲ್ಲೂ ಕೂಡಿರುವ ಸಾಮಾನಿನ ಭಾರವನ್ನು ಲೆಕ್ಕ ಹಾಕಿ ಅದಕ್ಕೆ ಸರಿಯಾಗಿ ಮಹಡಿಯನ್ನು ಬಲವಾಗಿ ಕಟ್ಟಬೇಕು.

ಚಿತ್ರ-1

	ನಿಶ್ಚಲ ಮತ್ತು ಚಲಭಾರಗಳು ಕಟ್ಟಡದ ತಳದ ಕಡೆಗೆ ಇಳಿದ ಹಾಗೆ ಹೆಚ್ಚಾಗುತ್ತಾ ಹೋಗುತ್ತವೆ. ಭಾರವನ್ನು ಹೊರತಕ್ಕ ಗೋಡೆಗಳನ್ನೂ ಕಂಬಗಳನ್ನೂ ಅದಕ್ಕೆ ಸರಿಯಾಗಿ ದಪ್ಪವಾಗಿ ಮಾಡಬೇಕು. ಸಾಮಾನ್ಯವಾದ ವಾಸದಮನೆಗಳಿಗೆ ಒಳ್ಳೆಯ ಅಸ್ತಿಭಾರ ದೊರೆಯಬೇಕಾದರೆ ಬಹಳ ಆಳವಾಗಿ ಅಗೆಯಬೇಕಾದ್ದು ಅನಾವಶ್ಯಕ. ಇದಕ್ಕಾಗಿ ಒಂದೊಂದು ಮಣ್ಣು ಕುಸಿಯದ ಹಾಗೆ ಚದರಮೀಟರಿಗೆ ಎಷ್ಟು ಟನ್ನುಗಳನ್ನು ಹೊರಬಲ್ಲುದೆಂದು ಪ್ರಾಯೋಗಿಕವಾಗಿ ಪರೀಕ್ಷೆಮಾಡಬೇಕು. ಒಂದು ಮಣ್ಣು ಚದರಮೀಟರಿನ ಮೇಲೆ 22 ಟನ್ನುಗಳನ್ನು ಹೊರುವುದೆಂದು ಇಟ್ಟುಕೊಳ್ಳೋಣ. ಅದರ ಮೇಲೆ ಕಟ್ಟಬೇಕಾಗಿರುವ ಮನೆಯ ಗೋಡೆ ಒಂದು ಮೀಟರ್ ಉದ್ದದ ಮೇಲೆ ನಿಶ್ಚಲ ಮತ್ತು ಚಲಭಾರಗಳೂ ಸೇರಿ ಅಸ್ತಿಭಾರದ ಮೇಲೆ 26 ಟನ್ನುಗಳ ಭಾರವನ್ನು ತಂದರೆ ಅಸ್ತಿಭಾರದ ಅಗಲವನ್ನು 4ಗೆ ಹೆಚ್ಚಿಸಬೇಕು. ಇದು ತಳದ ಕಾಂಕ್ರೀಟಿನ ಅಗಲ. ಗೋಡೆಯ 1ಯ ಅಗಲವನ್ನು ಅಸ್ತಿಭಾರದಲ್ಲಿ ಕ್ರಮವಾಗಿ 4 ಯವರೆಗೂ ಹೆಚ್ಚಿಸಬೇಕು. 

	ಬಯಲಿನಲ್ಲಿ ಕಟ್ಟಿರುವ ಎತ್ತರವಾದ ಕಟ್ಟಡಗಳಲ್ಲಿ ಗಾಳಿಯ ಹೊಡೆತವನ್ನು ಮುಖ್ಯವಾಗಿ ಲೆಕ್ಕಕ್ಕೆ ತೆಗೆದುಕೊಳ್ಳಬೇಕು. ಬಿರುಗಾಳಿ ಕಟ್ಟಡದ ಹೊರ ಗೋಡೆಗಳ ಮೇಲೆ ಗಾಳಿಬೀಸುವ ದಿಕ್ಕಿನಲ್ಲಿ ಒತ್ತುತ್ತದೆ. ಎದುರುಗಡೆಯ ಗೋಡೆಗಳನ್ನು ಹೀರಿ ಎಳೆಯುತ್ತದೆ. ಆಗ ಎದುರುಗೋಡೆಯ ಹೊರಭಾಗದಲ್ಲಿ ಒತ್ತಡ ಕಟ್ಟಡದ ಒಳಗಡೆ ಇರುವುದಕ್ಕಿಂತ ಕಡಿಮೆಯಾಗಿರುತ್ತದೆ. ಕೊಂಚಮಟ್ಟಿಗೆ ನಿರ್ವಾತಸ್ಥಿತಿಯ ಪರಿಣಾಮವಾಗಿ ಒಳ ಗೋಡೆ ಹೊರಗಡೆಗೆ ಉರುಳಿಕೊಳ್ಳಬಹುದು.

	ಹೆಚ್ಚು ಇಳಿಕಲಿರುವ ಚಾವಣಿಯ ಮೇಲೆಯೂ ಗಾಳಿ ಒತ್ತಬಹುದು. ಆದರೆ ಇಳಿಜಾರು ಕಡಿಮೆಯಾಗಿದ್ದರೆ ಗಾಳಿ ಮೇಲಕ್ಕೆ ಏರಿ ಅದರ ತಲೆಯ ಮೇಲೆ ಹೋಗಿ ಗೋಡೆಯನ್ನೇ ಆಚೆಗೆ ತಳ್ಳುವ ಹಾಗೆ ಹೀರಬಹುದು. ಬಹಳ ಎತ್ತರವಾದ ಗುಡ್ಡಗಳ ಮೇಲೂ ಸಮುದ್ರತೀರದಲ್ಲಿಯೂ ಕಟ್ಟಡವನ್ನು ಮಗುಚಿ ಬೀಳಿಸುವಷ್ಟು ಗಾಳಿ ಬೀಸಬಹುದು. ಕೆಲವು ವೇಳೆ ಅಸ್ತಿಭಾರ ಭದ್ರವಾಗಿರದೇ ಇದ್ದರೆ ಹಗುರವಾದ ಕಟ್ಟಡವನ್ನು ಮೇಲಕ್ಕೆ ಎತ್ತಬಹುದು. ಮಟ್ಟವಾದ ಸಮತಲದ ಮೇಲೆ ಗಾಳಿಯ ಒತ್ತಡ ಗುಂಡಾದ ಭಾಗದ ಮೇಲಿನದಕ್ಕಿಂತ ಹೆಚ್ಚಾಗಿರುತ್ತದೆ. ಉದಾಹರಣೆಗಾಗಿ, ಒಂದು ಹೊಗೆಗೂಡು ಚಚ್ಚೌಕವಾಗಿದ್ದು ಒಂದು ಮುಖದಲ್ಲಿ ಗಾಳಿ ಬೀಸುತ್ತಾ ಅದರ ಮೇಲಿನ ಗಾಳಿಯ ಒತ್ತಡ ಅದೇ ಅಳತೆಯ ಗುಂಡಾದ ಹೊಗೆಯ ಗೂಡಿನ ಮೇಲೆ ಬರುವ ಒತ್ತಡದ ಒಂದೂವರೆಯಷ್ಟಿರುತ್ತದೆ. 

	ಒಂದು ಕಟ್ಟಡದಲ್ಲಿ ಕೊನೆಯ ಗೋಡೆಗಳೂ ಅಡ್ಡಗೋಡೆಗಳೂ ಗಾಳಿಯ ರಭಸದ ಬಹುಭಾಗವನ್ನು ತಡೆಯುತ್ತವೆ. ಒಳಗಡೆ ಅಡ್ಡಗೋಡೆಗಳೇ ಇಲ್ಲದೆ ಹೊರಗಡೆ ಕಂಬಗಳ ನಡುವೆ ಹಗುರವಾದ ಪುಟೀಪುಗಳಿದ್ದರೆ ಗಾಳಿ ಬೀಸುವ ದಿಕ್ಕಿನಲ್ಲಿರುವ ಕಂಬಗಳು ಗಾಳಿಯ ರಭಸವನ್ನೆಲ್ಲ ತಡೆಯಬೇಕಾಗುತ್ತದೆ. ಆದರೆ ಕೆಳಗಡೆ ಇರುವ ಕಾಂಕ್ರೀಟಿನ ನೆಲ ಈ ರಭಸದ ಒಂದು ಭಾಗವನ್ನು ಆಚೆಯ ಕಡೆಗೆ ಸಾಗಿಸುತ್ತದೆ.

	ಕಾಂಕ್ರೀಟಿನ ಅಸ್ತಿಭಾರಗಳಲ್ಲಿ ಅನೇಕ ನಮೂನೆಗಳಿವೆ. 1 ಒಂದೊಂದು ಕಂಬಕ್ಕೂ ಪ್ರತ್ಯೇಕವಾದ ಅಸ್ತಿಭಾರವಿರಬಹುದು; 2 ಎರಡುಮೂರು ಕಂಬಗಳಿಗೂ ಸಾಲಾಗಿ ಒಂದೇ ಅಸ್ತಿಭಾರವಿರಬಹುದು; 3 ಚಚ್ಚೌಕವಾದ ನಾಲ್ಕು ಕಂಬಗಳ ಕೆಳಗೂ ಒಂದೇ ಚಪ್ಪಡಿಯನ್ನು ಹಾಕಬಹುದು; 4 ನೆಲದ ಕೆಳಗಡೆ ದಸಿಗಳನ್ನು ಹೂಳಬಹುದು ; 5 ಸೇತುವೆಗಳ ಕಂಬಗಳ ಅಸ್ತಿಭಾರಗಳಲ್ಲಿ ಕೇಸನ್ ಮುಂತಾದ ವಿಶಿಷ್ಟ ಅಸ್ತಿಭಾರಗಳನ್ನು (ಕನ್ನಂಬಾಡಿ ಮೊದಲಾದ) ಕಲ್ಲಿನ ಕಟ್ಟೆಗಳಲ್ಲಿ ಗಟ್ಟಿಕಲ್ಲಿನ ಮೇಲೆ ಕಾಂಕ್ರೀಟಿನ ಅಸ್ತಿಭಾರಗಳನ್ನೂ ಉಪಯೋಗಿಸಬಹುದು.

	ಅಂಡರ್ ಪಿನ್ನಿಂಗ್: ಬೊಂಬಾಯಿ ಮೊದಲಾದ ನಗರಗಳಲ್ಲಿ ಹೊಸ ಕಟ್ಟಡದ ಅಸ್ತಿಭಾರವನ್ನು ತೆಗೆಯುವಾಗ ಅದು ಪಕ್ಕದಲ್ಲಿರುವ ಹಳೆಯ ಕಟ್ಟಡದ ಅಸ್ತಿಭಾರಕ್ಕಿಂತಲೂ ಕೆಳಗಡೆ ಹೋದರೆ ಹಳೆಯ ಮನೆ ಬೀಳದ ಹಾಗೆ ಅದರ ಅಸ್ತಿಭಾರದ ಕೆಳಗೆ ಆಧಾರಗಳನ್ನು ಕೊಡಬೇಕಾಗುತ್ತದೆ. ಇದಕ್ಕೆ ಅಂಡರ್ ಪಿನ್ನಿಂಗ್ ಎನ್ನುತ್ತಾರೆ. ಹಳೆಯ ಮನೆಗಳಿರುವ ಕಡೆ ಹೊಸ ಸೌಧಗಳನ್ನು ಕಟ್ಟುವಾಗ ಈ ಕೆಲಸವನ್ನು ಮೊದಲು ಮಾಡಬೇಕಾಗುತ್ತದೆ. ಪೂರ್ವಭಾವಿಯಾಗಿ ಪರೀಕ್ಷೆಮಾಡಿದ ದಸಿಗಳನ್ನು ಹಳೆಯ ಅಸ್ತಿಭಾರದ ಕೆಳಗೆ ಅಗೆದು ಕೂರಿಸಿ, ಅವು ಎಲ್ಲ ಹಳೆಯ ಕಟ್ಟಡದ ಎಲ್ಲ ಭಾರವನ್ನೂ ಹೊರುವಂತೆ ಅಂಡರ್‍ಪಿನ್ ಮಾಡುತ್ತಾರೆ. ಮೊದಲು ಹಳೆಯ ಕಟ್ಟಡದ ಕೆಳಗಡೆ ಕೆಲವು ಅಡಿಗಳ ಉದ್ದವಾಗಿ ಅಗೆದು 14"-20" ವ್ಯಾಸದ ಉಕ್ಕಿನ ಕೊಳಾಯಿಗಳನ್ನು ಹೊಸ ಅಸ್ತಿಭಾರದೊಳಗೆ ದಸಿಗಳ ಹಾಗೆ ಹೊಡೆಯುತ್ತಾರೆ. ಕೊನೆಯಲ್ಲಿ ಲಂಬವಾದ ಕೊಳಾಯಿಗಳಲ್ಲಿ ಕಾಂಕ್ರೀಟ್‍ನ್ನು ತುಂಬಿದಾಗ ಪಕ್ಕ ದಸಿಗಳಂತೆ ಕೆಲಸ ಮಾಡುತ್ತವೆ. ಈ ಕೊಳಾಯಿಗಳನ್ನು ಆಗಲೇ ಭಾರವನ್ನು ಹೊತ್ತಿರುವ ಅಸ್ತಿಭಾರದ ಕೆಳಗಡೆ ಇಳಿಸುವುದು ಸುಲಭವಲ್ಲ. ಹೆಚ್ಚಿನ ಒತ್ತಡದ ಫೋರ್ಸ್‍ಪಂಪಿನ ಬಲದಿಂದ ಕೆಲಸ ಮಾಡುವ ಬಲಿಷ್ಠವಾದ ನೀರಿನ ಒತ್ತಡದ ಜಾಕುಗಳು ಲಂಬವಾದ ಕೊಳಾಯಿಗಳನ್ನು ಹೊಸ ಅಸ್ತಿಭಾರದ ಕೆಳಗೆ ಕಷ್ಟಪಟ್ಟು ತಳ್ಳುತ್ತವೆ. ಕೆಳಗಡೆ ಗಟ್ಟಿಯಾದ ಅಸ್ತಿಭಾರ ಸಿಗುವವರೆಗೂ ಬೇರೆ ಕೊಳಾಯಿಗಳನ್ನು ಸೇರಿಸಿ ಜಾಕುಗಳಿಂದ ಕೆಳಕ್ಕೆ ತಳ್ಳುತ್ತಾರೆ. ಆಮೇಲೆ ಕೊಳಾಯಿಗಳೊಳಕ್ಕೆ ಕಾಂಕ್ರೀಟನ್ನು ತುಂಬುತ್ತಾರೆ. ಈಗ ಹಳೆಯ ಅಸ್ತಿಭಾರಕ್ಕೂ ದಸಿಯತಲೆಗೂ ನಡುವಿನ ಜಾಗದಲ್ಲಿ ಉಕ್ಕಿನ ಗರ್ಡರುಗಳನ್ನು ಜಾಕುಗಳ ಸಹಾಯದಿಂದ ಬಿಗಿಯಾಗಿ ಜೋಡಿಸಿ ತೂಕವೆಲ್ಲ ದಸಿಗಳ ಮೇಲೆ ಬೀಳುವಂತೆ ಮಾಡುತ್ತಾರೆ. ಕೊನೆಯಲ್ಲಿ ಗರ್ಡರುಗಳು ದಸಿಗಳತಲೆಗಳು ಎಲ್ಲವನ್ನು ಹಳೆಯ ಅಸ್ತಿಭಾರದಿಂದ ಹೊಸ ಅಸ್ತಿಭಾರದ ಮಟ್ಟದವರೆಗೂ ಕಾಂಕ್ರೀಟಿನಿಂದ ಮುಚ್ಚಿ ಅಸ್ತಿಭಾರ ಏಕರೂಪವಾಗುವಂತೆ ಮಾಡುತ್ತಾರೆ.

	ಈ ಅಂಡರ್ ಪಿನ್ನಿಂಗಿನಲ್ಲಿ ಹಳೆಯ ಅಸ್ತಿಭಾರದ ಕೆಳಗೆ ಆಸರೆಗಳನ್ನು ಕೊಡುವಾಗ ಮೇಲೆ ನಿಂತಿರುವ ಕಟ್ಟಡ ಕುಸಿಯದಂತೆ ನೋಡಿಕೊಳ್ಳುವುದೇ ದೊಡ್ಡ ಸಮಸ್ಯೆ. ಮೊದಲು ಕಾಂಕ್ರೀಟಿನ ಕೆಳಗಡೆ ಕೊಂಚದೂರ ಸಾಕಷ್ಟುಗಟ್ಟಿಯಾದ ನೆಲದವರೆಗೂ ಅಗೆದು, ಉಕ್ಕಿನ ಗರ್ಡರುಗಳಿಂದ ಆಸರೆಗಳನ್ನು ಕೊಟ್ಟು ಅಸ್ತಿಭಾರದ ಎರಡು ಕಡೆಗಳಲ್ಲಿಯೂ ಮರದ ಕಂಬಗಳಿಂದ ಆಧಾರವನ್ನು ಕೊಡುತ್ತಾರೆ. ಕಂಬದ ಮೇಲುಭಾಗಕ್ಕೂ ಗರ್ಡರಿನ ಕೆಳಭಾಗಕ್ಕೂ ನಡುವೆ ಬಿಗಿಯಾಗಿ ಅವುಗಳನ್ನು ಹೊಡೆಯುತ್ತಾರೆ. ಆಮೇಲೆ ಅಗಲವನ್ನು ಸಿಮೆಂಟ್ ಗಾರೆಯಿಂದ ಕಟ್ಟಿದ ಇಟ್ಟಿಗೆಯ ಕಟ್ಟಡದಿಂದ ಹೆಚ್ಚಿಸಿ ಮೇಲುಗಡೆ ಹಳೆಯಗೋಡೆಯನ್ನು ಅಗಲವಾಗಿ ಮಾಡುತ್ತಾರೆ. ಹಳೆಯ ಅಸ್ತಿಭಾರದ ಕಾಂಕ್ರೀಟಿಗೂ ಹೊಸ ಇಟ್ಟಿಗೆಯ ಗೋಡೆಯ ನಡುವೆ ಬಿಗಿಯಾಗಿ ಆಪುಗಳನ್ನು ಕೊಡುತ್ತಾರೆ. ಹೊಸ ಕೆಲಸ ಭಾರವನ್ನು ಹೊರುವಷ್ಟು ಬಲವಾದ ಮೇಲೆ ಪಕ್ಕದ ಭಾಗಗಳನ್ನು ಇದೇ ರೀತಿ ಬಲಪಡಿಸುತ್ತ ಹೋಗುತ್ತಾರೆ. 

ಚಿತ್ರ-2

	ದಸಿಯ ತಳಪಾಯ : ನೂತನ ಶಿಲಾಯುಗದ ಕಾಲದಿಂದಲೂ ವಾಸದ ಮನೆಗಳ ಆಧಾರಕ್ಕಾಗಿ ದಸಿಗಳನ್ನು ನೆಲದಲ್ಲಿ ಹೂಳುವ ಪದ್ಧತಿ ಬಳಕೆಯಲ್ಲಿದೆ. ಸಾವಿರಾರು ವರ್ಷಗಳ ಹಿಂದೆ ಸ್ವಿಟ್ಜರ್ಲೆಂಡಿನಲ್ಲಿ ಜನೀವ ಸರೋವರದ ತಳದಲ್ಲಿ ಭಾರಲಿ ಮರದ ದಸಿಗಳನ್ನು ಹೊಡೆದು ನೀರಿನ ಮಟ್ಟದ ಮೇಲೆ ಮನೆಗಳನ್ನು ಕಟ್ಟುತ್ತಿದ್ದರು. ಕೆಲವು ಕಡೆ ಮೇಲೆ ಕಟ್ಟಿದ ಮನೆಗಳೇ ಇಲ್ಲ. ನೀರಿನ ಕೆಳಗಡೆ ದಸಿಗಳು ಮಾತ್ರ ಇವೆ. ಇದಕ್ಕೆ ಕಾರಣವೇನೆಂದರೆ ನೀರಿನೊಳಗೆ ಯಾವಾಗಲೂ ಇರುವ ಮರವೂ ನೀರನ್ನು ಮುಟ್ಟದೆ ಇರುವ ಮರವೂ ಚೆನ್ನಾಗಿ ಬಾಳಿಕೆ ಬರುತ್ತವೆ. ರೋಮನ್ನರು ತಮ್ಮ ಕಟ್ಟಡಗಳ ತಳಪಾಯದಲ್ಲಿ ದಸಿಗಳನ್ನು ಭಾರವಾದ ಕೊಡತಿಗಳಿಂದ ಹೊಡೆದು ಕೆಳಕ್ಕೆ ಇಳಿಸುತ್ತಿದ್ದರು. ಈಗ ಆವಿಯ ಸುತ್ತಿಗೆಯನ್ನು ಉಪಯೋಗಿಸುತ್ತಿದ್ದೇವೆ. ರೋಮನ್ನರು ಜೌಗುನೆಲದ ಮೇಲಿನ ಮನೆಗಳ ತಳದಲ್ಲಿ ಮಾತ್ರ ದಸಿಗಳನ್ನು ಉಪಯೋಗಿಸುತ್ತಿದ್ದರು. ಈಗ ಅತಿಭಾರವಾದ ಕಟ್ಟಡಗಳನ್ನು ಹೊತ್ತು ನಿಲ್ಲುವುದಕ್ಕಾಗಿ ಅಸ್ತಿಭಾರದಲ್ಲಿ ಈ ರೀತಿಯ ವಿಶೇಷ ಆಸರೆಗಳನ್ನು ಕೊಡುವುದು ವಾಡಿಕೆಯಾಗುತ್ತಿದೆ. 

	ಕಟ್ಟಡಗಳ ಅಸ್ತಿಭಾರವನ್ನು ನೆಲದ ಮಟ್ಟದ ಕೆಳಗಡೆ ಹರಡಿ ಮೇಲಿನಿಂದ ಬರುವ ಭಾರವನ್ನು ಭೂಮಿ ತಡೆಯುವಂತೆ ಮಾಡುವುದು ರೂಢಿ. ಆದರೆ ಭಾರಗಳು ನೆಲ ತಡೆಯಲಾರದಷ್ಟು ಇದ್ದಾಗ ಅಸ್ತಿಭಾರವನ್ನು ಕಲ್ಲಿನ ಬಂಡೆ ಸಿಕ್ಕುವವರೆಗೂ ಇಳಿಸಬೇಕಾಗುತ್ತದೆ. ಇದಕ್ಕೆ ಖರ್ಚು ಹಚ್ಚಾಗುವುದಲ್ಲದೇ ಕೆಲವು ಕಡೆ ಸುಮಾರಾದ ಆಳದಲ್ಲಿ ಬಂಡೆಯೇ ದೊರಕದೇ ಇರಬಹುದು. ಅಂಥ ಸನ್ನಿವೇಶಗಳಲ್ಲಿ ಮರದ ದಸಿಗಳನ್ನು ಹಿಂದಿನಿಂದಲೂ ಉಪಯೋಗಿಸುತ್ತಿದ್ದರು. ದಸಿಗಳಲ್ಲಿ ಎರಡು ನಮೂನೆಗಳಿವೆ. ಒಂದರಲ್ಲಿ ದಸಿ ತಲೆಯ ಮೇಲೆ ಕಂಬ ಭಾರವನ್ನು ಹೊರುವ ಹಾಗೆ ಹೊರುತ್ತದೆ. ಇನ್ನೊಂದರಲ್ಲಿ ದಸಿಗೂ ಭೂಮಿಗೂ ಇರುವ ಘರ್ಷಣೆಯ (ಫ್ರಿಕ್‍ಷನ್) ಬಲದಿಂದ ಭಾರವನ್ನು ಹೊರುತ್ತದೆ. 
ಒಂದು ಕಟ್ಟಡದ ಅಸ್ತಿಭಾರದಲ್ಲಿ ದಸಿಗಳನ್ನು ಉಪಯೊಗಿಸುವ ಉದ್ದೇಶಗಳು ಮುಖ್ಯವಾಗಿ ನಾಲ್ಕು : 1 ನೆಲವನ್ನು ಗಟ್ಟಿ ಮಾಡುವುದು: 2 ಮಟ್ಟವಾದ ಒತ್ತಡವನ್ನು ತಡೆಯುವುದು ; 3 ಒಂದು ಆವರಣವನ್ನು ಸುತ್ತುಗಟ್ಟುವುದು ; 4 ಲಂಬವಾದ (ವರ್ಟಿಕಲ್) ಭಾರವನ್ನು ಹೊರುವುದು. ಈ ಉದ್ದೇಶಗಳಿಗೆ ಹೊಂದುವ ಹಾಗೆ ದಸಿಗಳನ್ನು ಆಯ್ಕೆಮಾಡುತ್ತಾರೆ. ಆವರಣಗಳನ್ನು ಸುತ್ತುಗಟ್ಟುವುದಕ್ಕೆ ಚಪ್ಪಟೆಯಾದ ಉಕ್ಕಿನ ತಗಡಿನ ದಸಿಗಳು ಬೇಕಾಗುತ್ತವೆ. ಉಳಿದ ಉದ್ದೇಶಗಳಿಗೆ (i) ಗುಂಡಾದ, (ii) ಚಚ್ಚೌಕವಾದ, ಅಥವಾ (iii) ಎಂಟು ಮೂಲೆಯ ದಸಿಗಳು ಸರಿಹೋಗುತ್ತವೆ. ಹೆಚ್ಚಾಗಿ ಸುದ್ದೆ ಮಣ್ಣಿರುವ ನೆಲದಲ್ಲಿ ಹತ್ತಿರ ಹತ್ತಿರವಾಗಿ ಗಿಡ್ಡವಾದ ದಸಿಗಳನ್ನು ಹೂಳಿ, ಆಮೇಲೆ ದಸಿಗಳನ್ನು ಒಂದೊಂದಾಗಿ ಹೊರಕ್ಕೆ ತೆಗೆದು ಕುಳಿಗಳಲ್ಲಿ ಶುಭ್ರವಾದ ಮರಳನ್ನು ತುಂಬಿ ದಮ್ಮಸ್ಸು ಮಾಡಿದರೆ ಮೇಲೆ ಹೆಚ್ಚು ಹೊರೆಯನ್ನು ಹಾಕಬಹುದು. ಇವನ್ನು ಮರಳಿನ ದಸಿಗಳೆನ್ನುತ್ತಾರೆ. 

	ನೆಲದ ಪರೀಕ್ಷೆಗಾಗಿ ದಸಿಗಳನ್ನು ಸಾಧಾರಣ ಕೊಡತಿಯಿಂದಲೋ ಆವಿಯ ಕೊಡತಿಯಿಂದಲೋ ಹೊಡೆಯುವಾಗ ಕೊನೆಯ ಏಟಿನಿಂದ ದಸಿ ನೆಲದೊಳಕ್ಕೆ ಎಷ್ಟು ಇಳಿಯುವುದೆಂದು ನೋಡಿ, ಇಂಜಿನಿಯರುಗಳು ಆ ದಸಿಗಳ ಮೇಲೆ ಎಷ್ಟು ಭಾರವನ್ನು ಸುರಕ್ಷಿತವಾಗಿ ಹೇರಬಹುದೆಂದು ತೀರ್ಮಾನಿಸುತ್ತಾನೆ. 

	ಕೆಲವು ವೇಳೆ ಕಡಲಿನ ಅಡ್ಡಕಟ್ಟು, ಬಂದರು ಕಟ್ಟೆ, ಕಮಾನಿನ ಸೇತುವೆಯ ಗುದ್ದುಗಂಬ ಇಂಥ ಸನ್ನಿವೇಷಗಳಲ್ಲಿ ದಸಿಗಳ ಮಟ್ಟವಾದ ಒತ್ತಡವನ್ನು ಎದುರಿಸಬೇಕಾಗುತ್ತದೆ. ಆಗ ಇಂಜಿನಿಯರು ತನ್ನ ಅನುಭವದ ಮೇಲೆ ಮುಂದುವರಿಯಬೇಕಾಗುತ್ತದೆ. ಅಲ್ಲಿ ಪಕ್ಕದ ದಸಿಗಳನ್ನು ಜೊತೆಗೂಡಿಸಬಹುದು. ದಸಿಗಳ ತಲೆಗಳನ್ನು ಮೇಲುಗಡೆ ನೆಲಮಟ್ಟದಲ್ಲಿ ಕಾಂಕ್ರೀಟಿನ ಚಪ್ಪಡಿಯಲ್ಲಿ ಮುಚ್ಚಬಹುದು. ಕೆಲವು ವೇಳೆ ದಸಿಗಳನ್ನೇ ಓರೆಯಾಗಿ ಹೊಡೆಯಬಹುದು. 

	ಸೇತುವೆಗಳ ಕಂಬಗಳಿಗೆ ಅಸ್ತಿಭಾರವನ್ನು ಹಾಕುವಾಗ ಸುತ್ತಲ ಆವರಣದಲ್ಲಿ ಒಂದಕ್ಕೆ ಒಂದು ಹೊಂದಿಕೊಂಡಿರುವ ಉಕ್ಕಿನ ತಗಡಿನ ದಸಿಗಳನ್ನು ಲಂಬವಾಗಿ ನೆಡುತ್ತಾರೆ. ಇದರಿಂದ ಆವರಣದ ಒಳಗೆ ಬರುವ ಹೊಳೆಯ ನೀರು ಕಡಿಮೆಯಾಗುತ್ತದೆ. ಕೊಂಚ ನೀರು ಜಿನುಗಿದರೂ ಪಂಪುಗಳಿಂದ ಸುಲಭವಾಗಿ ಎತ್ತಿ ಹೊಳೆಗೆ ಸಾಗಿಸಬಹುದು.

	ಲಂಬವಾದ ಭಾರಗಳನ್ನು ಹೊರಬೇಕಾದ ದಸಿಗಳು ಮುಖ್ಯವಾಗಿ ನಾಲ್ಕು ಬಗೆಯಾಗಿವೆ. (i) ಸಾದಾ ದಸಿಗಳನ್ನು ಮರ, ಕಾಂಕ್ರೀಟ್ ಇವುಗಳಿಂದ ಮಾಡುತ್ತಾರೆ. ಮೇಲುಗಡೆ ಮಣ್ಣು ಮೆತುವಾಗಿದ್ದು, ಕೆಳಗಡೆ ಕೊಂಚ ಗಟ್ಟಿಯಾಗಿರುವ ಕಡೆ ಈ ದಸಿಗಳನ್ನು ಉಪಯೋಗಿಸಬಹುದು. ಕೆಳಗಡೆ ದಸಿ ಇಳಿಯದಷ್ಟು ನೆಲ ಗಟ್ಟಿಯಾಗಿದ್ದರೆ ದಸಿಗಳು ಕಂಬಗಳಂತೆ ಭಾರಗಳನ್ನು ಹೊರುತ್ತವೆ. (ii) ದಸಿಯ ತಳ ಸುಮಾರಾಗಿ ಗಟ್ಟಿಯಾದ ಪದರವನ್ನು ಮುಟ್ಟಿದರೆ ಕಾಂಕ್ರೀಟಿನಿಂದ ಮಾಡಿದ ದಸಿಗಳನ್ನು (ಪೆಡೆಸ್‍ಟಲ್) ಉಪಯೋಗಿಸಬಹುದು. (iii) ದಸಿಗಳು ನೆಲದಲ್ಲಿ ಹೆಚ್ಚಾಗಿ ಇಳಿಯದೆ ಹೋದರೆ ಕೆಳಗಡೆ ತಿರಿಪಿನ ಅಂಚನ್ನು ಜೋಡಿಸಿ ಕ್ಯಾಪ್ಸ್ಟನ್ನಿನಿಂದ ತಿರುಗಿಸಬಹುದು. ಈ ದಸಿಗಳನ್ನೂ ತಟ್ಟೆಯಮಾದರಿಯ ತಳದ ದಸಿಗಳನ್ನೂ ಇಳಿಸುವುದಕ್ಕೆ ನೀರಿನ ಧಾರಾ ನಳಿಯಿಂದ ತುಂಬ ಉಪಯೋಗವಾಗುತ್ತದೆ. (iv) ಮೆದುವಾದ ನೆಲದಲ್ಲಿ ಸಾದಾ ದಸಿಗೆ ನಾಲ್ಕು ಉದ್ದವಾದ ಮರದ ತುಂಡುಗಳನ್ನು ಬೋಲ್ಟುಗಳಿಂದೆ ಜೋಡಿಸಿ ಘರ್ಷಣೆಯ ಬಲದಿಂದ ಹೆಚ್ಚು ಭಾರವನ್ನು ಹೊರುವ ಹಾಗೆ ಮಾಡಬಹುದು. 

	ಒಂದು ದಸಿ ಹೊರಬಹುದಾದ ಭಾರ ದಸಿಯ ಬಲದ ಮೇಲಲ್ಲ, ಅದು ಹೊಕ್ಕಿರುವ ಒಳನೆಲದ ಬಲದ ಮೇಲೆ ನಿರ್ಣಯವಾಗುತ್ತದೆ. ಆದ್ದರಿಂದ ದಸಿಯ ಅಸ್ತಿಭಾರದ ವಿಜ್ಞಾನ ಮಣ್ಣಿನ ಗುಣಗಳ ಮೇಲೆ ನಿಂತಿದೆ.

	ಮೇಲೆ ಬರುವ ಕಟ್ಟಡದ ಭಾರ ಅಸ್ತಿಭಾರದಲ್ಲಿ ಅಗೆದಾಗ ಸುಮಾರಾದ ಆಳದಲ್ಲಿ ಭೂಮಿ ಹೊರಲಾರದಷ್ಟು ಹೆಚ್ಚಾಗಿದ್ದಾಗ ದಸಿಗಳನ್ನು ಉಪಯೋಗಿಸುತ್ತಾರೆ. ಸಮುದ್ರ ತೀರದಲ್ಲಿ ಕಂಬಗಳು, ಬಂದರು ಕಟ್ಟೆಗಳು, ಹಡಗು ಕಟ್ಟೆಗಳು ಇವನ್ನು ಕಟ್ಟುವಾಗ ದಸಿಗಳು ಅವಶ್ಯವಾಗುತ್ತವೆ. ಅವುಗಳನ್ನು ಮರ, ಪ್ರಬಲಿತ ಕಾಂಕ್ರೀಟ್ ಇಲ್ಲವೆ ಉಕ್ಕಿನಿಂದ ಮಾಡಬಹುದು. ಪೂರ್ವದಲ್ಲಿ ಮರವನ್ನೇ ಉಪಯೊಗಿಸುತ್ತಿದ್ದರು. ಈಚೆಗೆ ದೊಡ್ಡಕಟ್ಟಡಗಳಿಗೆ ಪ್ರಬಲಿತ ಕಾಂಕ್ರೀಟ್ ಮತ್ತು ಉಕ್ಕನ್ನು ಮಾತ್ರ ಬಳಸುತ್ತಾರೆ. ನೆಲದೊಳಕ್ಕೆ ಹೊಳುವ ತಿರಿಪಿನ ದಸಿಗಳಿಗೆ ತಾಂಡವಾಳ ಬಳಸಬಹುದು. ಪ್ರಬಲಿತ ಕಾಂಕ್ರೀಟಿನ ದಸಿಗಳನ್ನು ಚಚ್ಚೌಕವಾಗಿ ಇಲ್ಲವೆ ಎಂಟು ಮೂಲೆಗಳಲ್ಲಿ ಮೇಲೆನಿಂದ ಹೊಡೆಯುವ ಏಟುಗಳನ್ನು ತಡೆದುಕೊಂಡು ನೆಲದೊಳಕ್ಕೆ ಇಳಿಯುವಂತೆ ಉಕ್ಕನ್ನು ಹುದುಗಿಸಿ, ಪೂರ್ವಭಾವಿಯಾಗಿ ತಯಾರಿಸಿಟ್ಟು ಬೇಕಾದಾಗ ಉಪಹೋಗಿಸುತ್ತಾರೆ. ಉಕ್ಕಿನ ದಸಿಗಳು ಗುಂಡಾಗಿರಬಹುದು, ಕೊಳವಿಗಳ ಹಾಗಿರಬಹುದು ಇಲ್ಲವೆ ವಿಶೇಷ ಆಕಾರಗಳಲ್ಲಿರಬಹುದು. 30ಮೀ ಉದ್ದದ ದಸಿಗಳೂ ಬಳಕೆಯಲ್ಲಿವೆ. ಆದರೆ ಸಾಮಾನ್ಯವಾಗಿ ದಸಿಗಳ ಉದ್ದ 10-60ಮೀ ವರೆಗೆ ಹೋಗುತ್ತದೆ.

	ಕಾಂಕ್ರೀಟಿನ ದಸಿಗಳು : ನೆಲದೊಳಕ್ಕೆ ಅಸ್ತಿಭಾರದಲ್ಲಿ ಹೊಡೆದ ಕಾಂಕ್ರಿಟಿನ ದಪ್ಪವಾದ ಕಂಬಕ್ಕೆ ದಸಿಯೆನ್ನುತ್ತಾರೆ. ಕಂಬಗಳನ್ನು ಕಟ್ಟುವುದಕ್ಕಿಂತ ಈ ಕ್ರಮದಲ್ಲಿ ಖರ್ಚು ಕಡಿಮೆಯಾಗುತ್ತದೆ. ಸಾಮಾನ್ಯವಾಗಿ ಸೇತುವೆಯ ಗುದ್ದುಗಂಬಗಳ ಕೆಳಗೂ ಮನೆಯ ಕಂಬಗಳ ಕೆಳಗೂ ಕೇಂದ್ರೀಕೃತವಾದ ಭಾರಗಳನ್ನು ಹೊರುವುದಕ್ಕಾಗಿ ದಸಿಗಳನ್ನು ಹೊಡೆಯುವುದೇ ಹೆಚ್ಚು. ಇವುಗಳನ್ನು ಕೊನೆಯ ಗಟ್ಟಿಯಾದ ಪದರವನ್ನು ಮುಟ್ಟುವವರೆಗೂ ಹೊಡೆದರೆ ಭಾರವನ್ನು ಹೊರುವ (ಬೇರಿಂಗ್) ದಸಿಗಳೆಂದೂ, ದಸಿಗಳ ಪಕ್ಕಗಳ ಘರ್ಷಣೆ ಸಾಕಷ್ಟು ಪ್ರತಿಕ್ರಿಯೆಯನ್ನು ಒದಗಿಸಿದರೆ ಘರ್ಷಣೆಯ ದಸಿಗಳೆಂದೂ ಕರೆಯುತ್ತಾರೆ. ಮೇಲಿನಿಂದ ಬರುವ ಭಾರವನ್ನು ಸಮವಾಗಿ ಹಂಚುವುದಕ್ಕಾಗಿ ದಸಿಗಳ ತಲೆಗಳ ಮೇಲೆ ಮರದ ಚೌಕಟ್ಟುಗಳನ್ನೋ ಕಾಂಕ್ರೀಟುಗಳನ್ನೋ ಹರಡುತ್ತಾರೆ.

	ಇವುಗಳನ್ನು ಪೂರ್ವಭಾವಿಯಾಗಿ ಬೇರೆಕಡೆ ತಯಾರಿಸಬಹುದು. ಇಲ್ಲವೆ ಸ್ಥಳದಲ್ಲಿಯೇ ಎರಕ ಹೊಯ್ಯಬಹುದು. ಮೊದಲನೆಯ ನಮೂನೆಯಲ್ಲಿ ಬಲಗಡೆ ಉಕ್ಕಿನ ಕಂಬಗಳನ್ನಿಟ್ಟು ಭದ್ರಪಡಿಸುತ್ತಾರೆ. ಪ್ರಬಲಿತ ಕಾಂಕ್ರೀಟಿನ (ರೀಇನ್ ಫೋರ್ಸ್‍ಡ್) ಒತ್ತು ಬಲ ಹೆಚ್ಚು. ಕೊನೆಗಳನ್ನು ಕೊಡತಿಗಳಿಂದ ಬಡಿದು ನೆಲದಲ್ಲಿ ಇಳಿಸುವಾಗ ಆ ತ್ರಾಸವನ್ನು ತಡೆದುಕೊಳ್ಳುತ್ತದೆ. ಪಕ್ಕಗಳಲ್ಲಿ ಬಗ್ಗುವುದಕ್ಕೆ ಅವಕಾಶವನ್ನೂ ಕೊಡುವುದಿಲ್ಲ. ದಸಿಗಳು ನೆಲದೊಳಕ್ಕೆ ಇಳಿಯುವ ಕೊನೆಗಳಲ್ಲಿ ಉಕ್ಕನ್ನೋ ತಾಂಡವಾಳ ಹೊದಿಸಿರುತ್ತಾರೆ. ಈಗಲಂತೂ ಬೇಗ ಗಟ್ಟಿಯಾಗುವ ಸಿಮೆಂಟ್ ಬಂದಿರುವುದರಿಂದ ಕೆಲವೇ ದಿನಗಳಲ್ಲಿ ದಸಿಗಳನ್ನು ಎರಕ ಹೊಯ್ದು ನೆಲದೊಳಕ್ಕೆ ಇಳಿಸಬಹುದು.

	ಸ್ಥಳದಲ್ಲಿಯೇ ಎರಕ ಹೊಯ್ದ ದಸಿಗಳಲ್ಲಿ ಕೆಲವು ವಿಶೇಷ ಅನುಕೂಲತೆಗಳಿವೆ. ಬೇರೆ ಕಡೆ ಎರಕಹೊಯ್ದು ಸಾಗಿಸುವ ತೊಂದರೆ ತಪ್ಪುತ್ತದೆ. ದಸಿಗಳನ್ನು ತಯಾರಿಸಿದ ಮೇಲೆ ಬೇಗ ಭಾರವನ್ನು ಹೇರಬಹುದು. ಇದರಲ್ಲಿ ಅನೇಕ ನಮೂನೆಗಳಿವೆ. (I) ಕೆಳಕ್ಕೆ ಹೋಗುತ್ತ ಕ್ರಮೇಣ ಸಣ್ಣದಾಗುವ ಕೊಳವಿಯನ್ನು ಮೊದಲು ಹೊಡೆದು ಆಮೇಲೆ ಅದನ್ನು ಮೇಲಕ್ಕೆ ಎತ್ತಿ, ಆ ಜಾಗದಲ್ಲಿ ಕಾಂಕ್ರೀಟನ್ನು ತುಂಬುತ್ತಾರೆ ಅಥವಾ ಒಂದು ಉರುಳೆ (ಸಿಲಿಂಡರ್) ಆಕಾರದ ಸರಳನ್ನೂ (ಮ್ಯಾಂಡ್ರೆಲ್) ಅದರ ಹೊರಗಡೆ ಒಂದು ಕವಚವನ್ನೂ (ಶೀತ್) ಹೊಡೆದು ಆಮೇಲೆ ಸರಳನ್ನು ಹೊರಕ್ಕೆ ಎಳೆದು ಆ ಜಾಗದಲ್ಲಿ ಸಿಮೆಂಟ್ ಕಾಂಕ್ರೀಟನ್ನು ತುಂಬಬಹುದು. (ii) ಸಾಮಾನ್ಯವಾದ ಕೊಳವಿಗೆ ತಳದಲ್ಲಿ ಚೂಪಾದ ಲೋಹದ ರಕ್ಷಣೆಯನ್ನು ಕೊಟ್ಟು, ಅದನ್ನು ನೆಲದಲ್ಲಿ ಸಾಕಷ್ಟು ಆಳವಾಗಿ ಹೊಡೆದ ಮೇಲೆ ಕೊಳವಿಯನ್ನು ಕ್ರಮಕ್ರಮವಾಗಿ ಮೇಲಕ್ಕೆ ಎತ್ತಿ ಕಾಂಕ್ರೀಟನ್ನು ತುಂಬುತ್ತ ಹೋಗಬಹುದು. ಅವಶ್ಯವಾದ ಕಡೆ ಒಳಗೆ ಉಕ್ಕಿನ ಚೌಕಟ್ಟನ್ನಿಟ್ಟು ಭದ್ರ ಕಾಂಕ್ರೀಟನ್ನು ತುಂಬಬಹುದು. (iii) ಈ ಕೊಳವಿಗಳ ತಳವನ್ನು ಅಗಲವಾಗಿ ಮಾಡಿ ಹೆಚ್ಚು ಭಾರವನ್ನು ಹೊರುವಂತೆ ಮಾಡಬಹುದು. (iv) ದೊಡ್ಡ ಕಬ್ಬಿಣದ ಕೊಳವಿಗಳನ್ನು ನೆಲದೊಳಕ್ಕೆ ಇಳಿಸಿ ಅವುಗಳೊಳಗಿನಿಂದ ಮಣ್ಣನ್ನು ತೆಗೆದು ಆ ಜಾಗದಲ್ಲಿ ಕಾಂಕ್ರೀಟನ್ನು ತುಂಬಬಹುದು. 

	ದಸಿಗಳನ್ನು ಎರಡು ಸಮಕೋನವಾದ ಅಕ್ಷಗಳ ಮೇಲೆ ಒಂದು ದಸಿಗೂ ಇನ್ನೊಂದಕ್ಕೂ ಇರಬೇಕಾದ ಅಂತರವನ್ನು ಮಣ್ಣಿನ ಗುಣಕ್ಕೆ ಅನುಗುಣವಾಗಿ ಒಂದೊಂದು ಸಂದರ್ಭಗಳಲ್ಲಿಯೂ ಗೊತ್ತುಮಾಡಬೇಕು.

	ದಸಿಗಳನ್ನು ಹೊಡೆಯುವ ಸಾಧನಗಳು: ಇವು ದಸಿಗಳ ತಲೆಗಳ ಮೇಲೆ ಒಂದಾದಮೇಲೊಂದು ಸುತ್ತಿಗೆಯ ಏಟುಗಳನ್ನು ಕೊಟ್ಟು ಅವನ್ನು ನೆಲದೊಳಕ್ಕೆ ಇಳಿಸುತ್ತವೆ. ಹಳೆಯ ನಮೂನೆಯಲ್ಲಿ ಒಂದು ದಸಿಯ ಚೌಕಟ್ಟು, ಸುತ್ತಿಗೆ ಮತ್ತು ಎತ್ತು ಯಂತ್ರವನ್ನು (ವಿಂಚ್) ಉಪಯೋಗಿಸುತ್ತಿದ್ದರು. ಈಚೆಗೆ ಕೂಡತಿಯನ್ನು ಒಂದು ಕ್ರೇನಿನಿಂದ ತೂಗು ಹಾಕಿ ಸ್ವಯಂಚಲಿಯಾಗಿ ಏಟುಗಳನ್ನು ಕೊಡುವುದು ಸಾಧ್ಯವಾಗಿದೆ. ಕೊಡತಿಯನ್ನೂ ದಸಿಯನ್ನೂ ಎತ್ತುವ ಯಂತ್ರವನ್ನೂ ವಿದ್ಯುಚ್ಛಕ್ತಿಯಿಂದ ನಡೆಸುತ್ತಾರೆ. ದಸಿಯ ಚೌಕಟ್ಟುಗಳನ್ನು ಉಕ್ಕಿನಿಂದ 6ಮೀ-30ಮೀ ಎತ್ತರದವರೆಗೂ ತಯಾರಿಸುತ್ತಾರೆ. ಚೌಕಟ್ಟುಗಳನ್ನು ಚಕ್ರಗಳ ಮೇಲೋ ರೋಲರುಗಳ ಮೇಲೋ ಬೇಕಾದ ಸ್ಥಳಕ್ಕೆ ಒಯ್ಯಬಹುದು. ಇಲ್ಲವೆ ದೋಣಿಗಳ ಮೇಲೆ ಹೊಳೆಯಲ್ಲಿರುವ ಯಾವ ಜಾಗಕ್ಕೆ ಬೇಕಾದರೂ ಸಾಗಿಸಬಹುದು. ಸಮುದ್ರದೊಳಕ್ಕೆ ಚಾಚಿಕೊಂಡಿರುವ ಏರಿಗಳನ್ನು ಕಟ್ಟುವುದಕ್ಕೆ ವಿಶೇಷವಾದ ಚಾಚುತೊಲೆಯ (ಕ್ಯಾಂಟಿಲಿವರ್) ಚೌಕಟ್ಟುಗಳಿವೆ.

	ದಸಿಯ ಕೊಡತಿಗಳು ವಿದ್ಯುತ್ತಿನಿಂದ ನಡೆಯುವ ಎತ್ತು ಯಂತ್ರದಿಂದ ವೇಗವಾಗಿ ಕೆಳಕ್ಕೆ ಇಳಿಯುವ ಭಾರಗಳಂತಿರುತ್ತವೆ. ಸ್ವಯಂಚಲಿಯಾದ ದ್ವಿಮುಖವಾಗಿ ಕೆಲಸ ಮಾಡುವ ಕೊಡತಿಗಳಲ್ಲಿ ಆವಿ ಇಲ್ಲವೆ ಸಂಮರ್ದಿತ ಗಾಳಿಯಿಂದ ಕೊಡತಿ ಮೇಲಕ್ಕೆ ಹೋಗಿ ವೇಗವಾಗಿ ದಸಿಯ ತಲೆಯ ಮೇಲೆ ಒಂದಾದ ಮೇಲೊಂದು ಬಲವಾದ ಏಟುಗಳನ್ನು ಕೊಡುತ್ತದೆ. ಅರ್ಧ ಸ್ವಯಂಚಲಿಯಾದ ಏಕಮುಖವಾದ ಕೊಡತಿಯಲ್ಲಿ ಯಂತ್ರ ಕೊಡತಿಯನ್ನು ಮೇಲಕ್ಕೆ ಎತ್ತುತ್ತದೆ. ಆಮೇಲೆ ಅದು ತನ್ನ ಭಾರದಿಂದ ಕೆಳಕ್ಕೆ ಬಿದ್ದು ದಸಿಯ ಮೇಲೆ ಏಟನ್ನು ಕೊಡುತ್ತದೆ. ಆಗ ಯಂತ್ರ ಅದನ್ನು ಮೇಲಕ್ಕೆ ಎತ್ತುತ್ತದೆ. ತಿರುಗಿ ದಸಿಯ ಮೇಲೆ ಏಟು ಬೀಳುತ್ತದೆ. 

	ತಗಡಿನ ದಸಿಗಳು (ಶೀಟ್ ಫೈಲ್ಸ್) : ಇವನ್ನು ಮರದಿಂದಲೋ ಪ್ರಬಲಿತ ಕಾಂಕ್ರೀಟಿನಿಂದಲೋ ಚಚ್ಚೌಕವಾಗಿ ಮಾಡಬಹುದು. ಇಲ್ಲವೆ ಉಕ್ಕಿನಲ್ಲಿ ಒಂದಕ್ಕೊಂದು ಸೇರಿಕೊಳ್ಳುವ ಹಾಗೆ ಮಾಡಬಹುದು. ಆಗ ಪಕ್ಕದ ದಸಿಗಳೆಲ್ಲ ಅಖಂಡವಾಗಿದ್ದಂತೆ ಭಾರವನ್ನು ಹೊರುತ್ತವೆ. ನೀರಿನ ತಳದಲ್ಲಿ ಸೇತುವೆಗಳು, ಕಟ್ಟೆಗಳು ಇವುಗಳ ಅಸ್ತಿಭಾರದಲ್ಲಿ ತಾತ್ಕಾಲಿಕವಾದ ಹದಿಕಟ್ಟೆಗಳನ್ನು (ಕಾಫರ್ ಡ್ಯಾಮ್ಸ್) ಕಟ್ಟುವುದರಲ್ಲಿ ದಸಿಗಳಿಂದ ಉಪಯೋಗ ಹೆಚ್ಚು. ಈ ರೀತಿಯ ದಸಿಗಳನ್ನು ಬಲಿಷ್ಠವಾಗಿ ಕಟ್ಟುವುದು ಸಾಧ್ಯವಾದಾಗ ಇದರೊಳಕ್ಕೆ ನೀರು ನುಗ್ಗದೆ ಇರುವುದರಿಂದ ಹಡಗು ಕಟ್ಟೆಗಳ ಗೋಡೆಗಳನ್ನೂ ಜಲಾಶಯದ ಕಟ್ಟೆಗಳು ಮತ್ತು ಅಣೆಕಟ್ಟುಗಳ ಬಳಿ ನೀರು ಒಳಗೆ ಬರದಂಥ ಗೋಡೆಗಳನ್ನೂ ಕಟ್ಟಲು ಉಪಯೋಗಿಸುತ್ತಿದ್ದಾರೆ. 

	ವಿಶಿಷ್ಟ ಅಸ್ತಿಭಾರಗಳು : ದೊಡ್ಡ ಸೇತುವೆಗಳ ಕಂಬಗಳು. ಹಡಗು ಕಟ್ಟೆಯ ಗೋಡೆಗಳು ಮತ್ತು ಬಂದರುಗಳಲ್ಲಿ ಹೆಚ್ಚು ಭಾರವನ್ನು ಹೊರುವುದಕ್ಕಾಗಿ ವಿಶಿಷ್ಟ ಅಸ್ತಿಭಾರಗಳು ಬೇಕಾಗುತ್ತವೆ. ಇವುಗಳನ್ನು ಅಗೆಯುವಾಗ ಲಂಬವಾದ ಪಕ್ಕಗಳನ್ನು ತಡೆಯಲು ತಾತ್ಕಾಲಿಕವಾಗಿ ಆಸರೆಗಳು ಬೇಕಾಗುತ್ತವೆ.

	ತೆರೆದ ಕೇಸನ್: ಇದು ತಳ ಮತ್ತು ಮುಚ್ಚಳ ಇಲ್ಲದ ದೊಡ್ಡ ಉರುಳೆ(ಸಿಲಿಂಡರ್). ಇದನ್ನು ಕಂಬದ ಅಸ್ತಿಭಾರದಲ್ಲಿಟ್ಟು ಮಣ್ಣನ್ನು ಒಳಗಿನಿಂದ ಯಂತ್ರಗಳಲ್ಲಿ ತೋಡಿ ಕೆಳಕ್ಕೆ ಇಳಿಸುತ್ತಾರೆ. ನೀರನ್ನು ಪಂಪುಮಾಡಿ ಉರುಳೆಗಳು ಸಾಕಷ್ಟು ಇಳಿದಮೇಲೆ ಅದನ್ನು ಅಲ್ಲಿಯೇ ಬಿಟ್ಟು ಒಳಗಡೆ ಕಾಂಕ್ರೀಟನ್ನು ತುಂಬಿ ಕಂಬಗಳನ್ನು ಕಟ್ಟುತ್ತಾರೆ. ಈ ಕೇಸನ್ನು ಉಕ್ಕಿಗೆ ಬದಲಾಗಿ ಪ್ರಬಲಿತ ಕಾಂಕ್ರೀಟಿನಿಂದಲೂ ಮಾಡಬಹುದು.

	ಸಂಮರ್ದಿತ ಗಾಳಿಯ ಪೆಟ್ಟಿಗೆ: ವರ್ತುಳಾಕಾರವಾಗಿ 20ಮೀ ವ್ಯಾಸದವರೆಗೂ ಇರುತ್ತದೆ. ಇದನ್ನು ಹುಸಿ ಮಣ್ಣಿರುವ ಸನ್ನಿವೇಶಗಳಲ್ಲಿ ಇನ್ನು ಯಾವ ಉಪಾಯವೂ ಸಾಧ್ಯವಾಗದೆ ಇದ್ದಾಗ ಉಪಯೋಗಿಸುತ್ತಾರೆ. ಈ ಪೆಟ್ಟಿಗೆಗೆ ತಳವಿಲ್ಲ; ಮುಚ್ಚಳವಿರುತ್ತದೆ. ಒಳಕ್ಕೆ ಗಾಳಿ ಹೋಗುವ ಹಾಗಿರುವುದಿಲ್ಲ. ನೆಲದ ಒಳಕ್ಕೆ ಇಳಿಯುವ ಹಾಗೆ ತಳದ ಅಂಚು ಚೂಪಾಗಿರುತ್ತದೆ. ಪೆಟ್ಟಿಗೆಯನ್ನು ಸೇತುವೆಯ ಕಂಬದ ಜಾಗಕ್ಕೆ ಜಂಗಲ್‍ಗಳಲ್ಲಿ ತರುತ್ತಾರೆ. ಸ್ಥಳದಲ್ಲಿ ಇಟ್ಟು ಗಾಳಿಯನ್ನು ಪೆಟ್ಟಿಗೆಯೊಳಕ್ಕೆ ಪಂಪು ಮಾಡಿ ನೀರನ್ನು ಹೊರದೂಡುತ್ತಾರೆ. ಒಂದು ಕವಾಟದಿಂದ (ಏರ್‍ಲಾಕ್) ಆಳುಗಳನ್ನು ಒಳಕ್ಕೆ ಬಿಡುತ್ತಾರೆ. ಕವಾಟದಲ್ಲಿ ಎರಡು ಭದ್ರವಾದ ಬಾಗಿಲುಗಳಿರುತ್ತವೆ. ಹಿಂದುಗಡೆಯ ಬಾಗಿಲನ್ನು ಮುಚ್ಚಿ ಮುಂದುಗಡೆಯದನ್ನು ಮುಚ್ಚುವ ಮೊದಲು ಮಧ್ಯಕ್ಕೆ ಆಳುಗಳನ್ನು ಬಿಡುತ್ತಾರೆ. ಆಮೇಲೆ ಮುಂದಿನ ಬಾಗಿಲನ್ನು ಮುಚ್ಚಿ ಹಿಂದಿನದನ್ನು ತೆರೆದು ಪೆಟ್ಟಿಗೆಯೊಳಕ್ಕೆ ಇಳಿಸುತ್ತಾರೆ. ಆಗ ಒಳಗಡೆ ಇರುವ ಸಂಮರ್ದಿತ ಗಾಳಿ ಹೊರಕ್ಕೆ ಹೋಗಲು ಅವಕಾಶವಾಗುವುದಿಲ್ಲ, ಪೆಟ್ಟಿಗೆಯೊಳಗಿನ ಮಣ್ಣನ್ನು ಆಳುಗಳು ಅಗೆದು ಬಕೆಟ್ಟುಗಳಲ್ಲಿ ತುಂಬಿ ರಾಟೆಗಳ ಮೂಲಕ ಹೊರಕ್ಕೆ ಸಾಗಿಸುತ್ತಾರೆ. ಇನ್ನೊಂದು ಕವಾಟದಿಂದ ಮಣ್ಣು ಹೊರಕ್ಕೆ ಹೋಗುತ್ತದೆ. ಪೆಟ್ಟಿಗೆ ಹುಸಿಮಣ್ಣಿನಲ್ಲಿ ಇಳಿಯುತ್ತದೆ. ಪೆಟ್ಟಿಗೆ ಇಳಿದ ಹಾಗೆ ನೀರನ್ನು ಹೊರಕ್ಕೆ ತಳ್ಳಿ ಆಳುಗಳು ಅಗೆಯಲು ಅವಕಾಶವಾಗುವುದಕ್ಕೆ ಗಾಳಿಯ ಒತ್ತಡ ಹೆಚ್ಚಾಗಬೇಕಾಗುತ್ತದೆ. 

	ಪೆಟ್ಟಿಗೆಯ ಮುಚ್ಚಳವನ್ನು ಉಕ್ಕಿನ ತಗಡುಗಳಿಂದ ಮಾಡಿರುತ್ತಾರೆ. ಸುಮಾರಾಗಿ ಪೆಟ್ಟಿಗೆ ಇಳಿದಮೇಲೆ ಅದರಮೇಲೆಯೇ ಅಸ್ತಿಭಾರದ ಕೆಲಸ ಪ್ರಾರಂಭವಾಗುತ್ತದೆ. ಕೆಳಗೆ ಆಳುಗಳು ಮಣ್ಣನ್ನು ತೋಡುತ್ತಲೇ ಇರುತ್ತಾರೆ. ಆಗ ಪೆಟ್ಟಿಗೆ ವೇಗವಾಗಿ ಕೆಳಕ್ಕೆ ಇಳಿಯುತ್ತದೆ. ಕೆಳಗೆ ಬಂಡೆ ಸಿಕ್ಕುವವರೆಗೂ ಪೆಟ್ಟಿಗೆ ಇಳಿದ ಮೇಲೆ ಅದನ್ನು ಒರಟಾಗಿ ಕಡಿದು ತೊಳೆದು ಸಿದ್ಧಪಡಿಸುತ್ತಾರೆ. ಒಳಗೆ ಕಾಂಕ್ರೀಟನ್ನು ತುಂಬಿ ಪೆಟ್ಟಿಗೆಯನ್ನು ಅಲ್ಲಿಯೇ ಬಿಟ್ಟು ಆಳುಗಳು ಮೇಲಕ್ಕೆ ಬರುತ್ತಾರೆ. ಪೆಟ್ಟಿಗೆ ಅಸ್ತಿಭಾರದಲ್ಲಿ ಸೇರಿಹೋಗುತ್ತದೆ. 

	ಹದಿಕಟ್ಟೆ(ಕಾಫರ್ ಡ್ಯಾಂ) : ಇದು ಸಾಮಾನ್ಯವಾಗಿ ನೀರಿನಿಂದ ಮುಚ್ಚಿರುವ ಹೊಳೆಯ ತಳದಂಥ ಪ್ರದೇಶಗಳಲ್ಲಿ ಒಂದು ಜಾಗವನ್ನು ಆವರಿಸಿರುವ ಕಟ್ಟೆ. ಒಂದು ನದಿಯ ಮೇಲೆ ಕಲ್ಲುಗಾರೆಯ ಕಟ್ಟೆಯನ್ನೋ ಸೇತುವೆಯನ್ನೋ ಕಟ್ಟ ಬೇಕಾದಾಗ ಅಸ್ತಿಭಾರವನ್ನು ಹಾಕಲು ಅಲ್ಲಿ ಒಂದು ಆವರಣವನ್ನು ಕಟ್ಟಿ ಒಳಗಿನಿಂದ ನೀರನ್ನು ಪಂಪುಗಳಿಂದ ಎತ್ತುತ್ತಾರೆ. ಈ ಆವರಣಕ್ಕೆ ಹದಿಕಟ್ಟೆಯೆಂದು ಹೆಸರು. ಇದರ ದೆಸೆಯಿಂದ ಹೊಸದಾಗಿ ನೀರು ಆವರಣದೊಳಗೆ ಬಂದಹಾಗೆಲ್ಲ ಒಳಗಿನ ನೀರನ್ನು ಎತ್ತಿದಮೇಲೆ ನೆಲದಲ್ಲಿ ಅಗೆಯಲು ಪ್ರಾರಂಭಿಸುತ್ತಾರೆ. ಇದನ್ನು ಹಡಗು ಕಟ್ಟೆಗಳು, ನಾಲೆಯ ಮಟ್ಟ ಬದಲಾವಣೆಗಳು ಕಟ್ಟೆಗಳು, ವಿದ್ಯುದಾಗಾರಗಳಲ್ಲಿನ ನಾಲೆಗಳು-ಇಂಥ ಕಡೆಗಳಲ್ಲಿ ಹೆಚ್ಚಾಗಿ ಉಪಯೋಗಿಸುತ್ತಾರೆ.

	ಹದಿಕಟ್ಟೆಯೂ ಆವರಣದ ತಳವೂ ನೀರಿನ ಒತ್ತಡದಿಂದ ಬಿರಿಯದ ಹಾಗೆ ಗಟ್ಟಿಯಾಗಿರಬೇಕು. ಸಾಮಾನ್ಯವಾಗಿ ಆವರಣದಲ್ಲಿ ನೀರೇ ಇಲ್ಲದಹಾಗೆ ಮಾಡುವುದು ರೂಢಿಯಿಲ್ಲ. ಅದಕ್ಕೆ ಖರ್ಚು ಹೆಚ್ಚಾಗುತ್ತದೆ. ಒಳಗೆ ಬರುವ ನೀರನ್ನು ಸುಮಾರಾಗಿ ಕಡಿಮೆಮಾಡಿದರೆ ಸಾಕು. ಇದ್ದ ನೀರನ್ನು ತಗ್ಗಾದ ಗುಂಡಿಗಳಿಗೆ ಸಾಗಿಸಿ ಒಂದೇ ಸಮನಾಗಿ ಪಂಪು ಮಾಡಬಹುದು.

	ನೀರಿನ ಆಳ ಹೆಚ್ಚಾಗಿಲ್ಲದೆ ಪ್ರವಾಹ ಸುಮಾರಾಗಿರುವ ಕಡೆಗಳಲ್ಲಿ ಜಿಗುಟುಮಣ್ಣಿನ ಕಟ್ಟೆಗಳನ್ನು ತಾತ್ಕಾಲಿಕವಾಗಿ ಕಟ್ಟಬಹುದು. ಅಥವಾ ಮರಳಿನಿಂದ ತುಂಬಿ ಹೊಲೆದ ಗೋಣಿಚೀಲಗಳನ್ನಿಟ್ಟು, ಚೀಲಗಳ ಸಂದುಗಳಲ್ಲಿ ಜೇಡಿಮಣ್ಣನ್ನು ತುಂಬಬಹುದು. ಆದರೆ ಹೊಳೆಗಳಲ್ಲಿ ಇಷ್ಟು ಸರಳವಾದ ಕಟ್ಟೆಗಳು ಸಾಕಾಗುವುದಿಲ್ಲ.

	ಸಣ್ಣ ಸೇತುವೆಗಳಲ್ಲಿ ಒಂದರ ಪಕ್ಕದಲ್ಲೊಂದು ಮರದ ದಸಿಗಳನ್ನು ಎರಡು ಸಾಲುಗಳಲ್ಲಿ ಹೂಡಿ, ಮೇಲುಗಡೆ ಬಿಗಿಯಾಗಿ ಕಟ್ಟಿ ಎರಡು ಸಾಲು ದಸಿಗಳ ನಡುವೆ ಜೇಡಿಮಣ್ಣನ್ನು ತುಂಬುವುದು ಒಂದು ಕ್ರಮ. ಮರದ ದಸಿಗಳಿಗೆ ಬದಲಾಗಿ ದೊಡ್ಡ ಸೇತುವೆಗಳಲ್ಲಿ ಒಂದಕ್ಕೊಂದು ತೊಡರಿಕೊಳ್ಳುವ ಉಕ್ಕಿನ ತಗಡಿನ ದಸಿಗಳನ್ನು ನಿಲ್ಲಿಸಬಹುದು. ಈ ದಸಿಗಳು ಪಾಯವನ್ನು ಹಾಕಬೇಕಾಗಿರುವ ಕಂಬದ ಜಾಗವನ್ನು ಸುತ್ತುವರಿಯುತ್ತವೆ. ಆಗ ಹೊರಗಿನಿಂದ ನೀರು ಆವರಣದೊಳಕ್ಕೆ ಬರುವುದಿಲ್ಲ. ಪಂಪುಗಳಿಂದ ಒಳಗಿನ ನೀರನ್ನು ಎತ್ತಬಹುದು. ಹದಿಕಟ್ಟೆಗಳು ಹೊರಗಡೆಯಿಂದ ಅವುಗಳ ಮೇಲೆ ಬೀಳುವ ಒತ್ತಡವನ್ನು ತಡೆಯುವಷ್ಟು ಬಲವಾಗಿರಬೇಕು.

	ಹಡಗುಕಟ್ಟೆಗಳಲ್ಲಿ (ಡಾಕ್ಸ್) ಆವರಣ ದೊಡ್ಡದಾಗಬೇಕಾದಾಗ ನೀರನೊಳಗೆ ಸುತ್ತಲೂ ಮಣ್ಣಿನ ಏರಿಯನ್ನು ಹಾಕಿ ಅದರ ಮಧ್ಯದಲ್ಲಿ ಉಕ್ಕಿನ ತಗಡಿನ ದಸಿಗಳನ್ನು ಹೊಡೆದು ನೀರು ಜಿನುಗುವುದನ್ನು ನಿಲ್ಲಿಸಬೇಕಾಗುತ್ತದೆ. 

	ನದಿಯ ತಳದಲ್ಲಿ ಕೇವಲ ಮರಳೇ ಇದ್ದರೆ ಅಸ್ತಿಭಾರದ ಕೆಲಸ ಕಷ್ಟವಾಗುತ್ತದೆ. ಖರ್ಚೂ ಶ್ರಮವೂ ಹೆಚ್ಚಾಗುತ್ತವೆ. ಹಡಗುಕಟ್ಟೆಗಳಲ್ಲಿ ಹಾಕಿದಹಾಗೆ ಸುತ್ತಲೂ ಮಣ್ಣಿನ ಏರಿಯನ್ನು ಹಾಕಿ ಉಕ್ಕಿನ ದಸಿಗಳನ್ನು ನಿಲ್ಲಿಸಿ ಒಳಗಿನ ಆವರಣದಿಂದ ನೀರನ್ನು ಎತ್ತಬೇಕಾಗುತ್ತದೆ.

	ನೀರಾವರಿಯ ಜಲಾಶಯದ ಕಟ್ಟೆಗಳನ್ನು ಕಟ್ಟುವಾಗ ಹಿಂದುಗಡೆ ನೀರಿನ ಆಳ ಹೆಚ್ಚಾಗಿರುತ್ತದೆ. ಉಕ್ಕಿನ ತಗಡಿನ ದಸಿಗಳಿಗೆ ಈ ಒತ್ತಡವನ್ನು ತಡೆಯುವುದು ಸಾಧ್ಯವಾಗುವುದಿಲ್ಲ. ಅದಕ್ಕಾಗಿ ತಾತ್ಕಾಲಿಕವಾಗಿ ಬಂದೋಬಸ್ತಾದ ಕಲ್ಲುಗಾರೆಯ ಗೋಡೆಯನ್ನು ಕಲ್ಲಿನ ಆಸ್ತಿಭಾರದ ಮೇಲೆ ಪರಮಾವಧಿ ನೀರಿನ ಆಳದ ಒತ್ತಡವನ್ನು ತಡೆಯುವಷ್ಟು ಅಗಲವಾಗಿ ಕಟ್ಟಿ ಮೇಲಕ್ಕೆ ಎತ್ತುತ್ತಾರೆ. ಈ ಹದಿಕಟ್ಟೆಯ ಕೆಲಸವನ್ನು ಬಟ್ಟಬೇಸಿಗೆಯಲ್ಲಿ ಕೈಗೊಳ್ಳುವುದು ಅನುಕೂಲ. ಈ ಹದಿಕಟ್ಟೆಯನ್ನು ಕಟ್ಟುವುದಕ್ಕೇ ಪೂರ್ವಸಿದ್ಧತೆಗಳು ಬೇಕಾಗುತ್ತವೆ. ಹದಿಕಟ್ಟೆಗಾಗಿ ಆರಿಸಿದ ಜಾಗದ ಮೇಲುಗಡೆ ಹೊಳೆಯ ತಳದಲ್ಲಿ ಮರಳು ಚೀಲಗಳನ್ನು ಸಾಕಷ್ಟು ಅಗಲವಾಗಿ ಇಟ್ಟು, ನಡುವಿನ ಸಂದುಗಳಲ್ಲಿ ಜೇಡಿಮಣ್ಣನ್ನು ತುಂಬಿ, ಬೇಸಗೆಯಲ್ಲಿ ಬರುವ ನೀರನ್ನು ಯಾವುದಾದರೂ ಒಂದು ಪಕ್ಕಕ್ಕೆ ಅಂದರೆ ಆಗಲೇ ಕಟ್ಟಿರಬಹುದಾದ ಕಲ್ಲುಗಾರೆಯ ಕಟ್ಟೆಗೋ ಅಥವಾ ಕೆಳನದಿಗೋ ಸಾಗಿಸಬೇಕು. ಈ ಸಿದ್ಧತೆಗಳಾದ ಮೇಲೆ ಹದಿಕಟ್ಟೆಯ ಅಸ್ತಿಭಾರದಲ್ಲಿ ಕಲ್ಲಿನ ತಳಹದಿ ಸಿಕ್ಕುವವರಗೂ ಅಗೆದು ಸುರ್ಕಿಕಾಂಕ್ರೀಟನ್ನು ತುಂಬಿ, ಹದಿಕಟ್ಟೆಯ ಗೋಡೆಯನ್ನು ಎತ್ತಿ ಜೊತೆಗೆ ಎರಡು ಪಕ್ಕಗಳಲ್ಲಿಯೂ ಆ ಗೋಡೆಯನ್ನೇ ನದಿ ಹರಿಯುವ ದಿಕ್ಕಿನಲ್ಲಿ ಸಮಕೋನವಾಗಿ ಮೇಲಿನ ಮಟ್ಟದವರೆಗೂ ಎತ್ತಬೇಕಾಗುತ್ತದೆ. ಇಷ್ಟೇ ಅಲ್ಲದೆ ಕಟ್ಟೆಯ ಆ ಮಟ್ಟದ ಅಗಲದ ಆಚೆಗೆ ಆವರಣದ ಕೆಳಭಾಗದಲ್ಲಿ ತಗ್ಗಾದ ತಾತ್ಕಾಲಿಕವಾದ ಕಲ್ಲುಗಾರೆಯ ಗೋಡೆಯನ್ನು ಕಲ್ಲುಗಾರೆಯ ಅಕ್ಷಕ್ಕೆ ಸಮಾನಾಂತರವಾಗಿ ಕಟ್ಟಿ, ಅದು ಹೊಳೆಯ ತಳದ ಮೇಲಕ್ಕೆ ಒಂದುಒಂದೂವರೆ ಮೀಟರು ಎತ್ತರದವರೆಗೂ ಬಂದ ಮೇಲೆ ಅದರ ಮೇಲುಗಡೆಯೂ ಮರಳಿನ ಚೀಲಗಳನ್ನಿಟ್ಟು, ಸಂದುಗಳಲ್ಲಿ ಜಿಗುಟಾದ ಜೇಡಿಮಣ್ಣನ್ನು ತುಂಬಿದರೆ ಸಾಕಾಗಬಹುದು. ಈಗ ಹದಿಕಟ್ಟೆಯ ಆವರಣ ಸಿದ್ಧವಾದ ಹಾಗಾಯಿತು. ಹೀಗೆ ನಿರ್ಮಿತವಾದ ಗುಂಡಿಯಿಂದ ವಿದ್ಯುತ್ತಿನ ಪಂಪುಗಳನ್ನು ಹೂಡಿ, ಹಗಲೂ ರಾತ್ರಿಯೂ ನೀರನ್ನು ಎತ್ತಿ ಕೆಳಗಿನ ಕಟ್ಟೆಯ ಆಚೆಗೆ ಸಾಗಿಸಬೇಕು. ನೆಲ ಕಾಣುವ ಹಾಗಾದ ಮೇಲೆ ಅಗೆಯುವುದನ್ನು ಪ್ರಾರಂಭಿಸಿ ಅಗೆದ ಮಣ್ಣನ್ನು ಹೊರಕ್ಕೆ ಸಾಗಿಸಬಹುದು. ರಾತ್ರಿಯುಲ್ಲಿ ಕೂಡಿ ಹಾಕಿಕೊಂಡ ನೀರನ್ನು ಪಂಪು ಮಾಡಿ ಬೆಳಗಾಗುವ ವೇಳೆಗೆ ಮತ್ತೆ ನೆಲ ಕಾಣುವಂತೆ ಅಣಿಮಾಡಬೇಕು. ಕೆಳಗಡೆ ಬಂಡೆ ಸಿಕ್ಕಿದಾಗ ಕುಳಿಗಳನ್ನು ತೋಡಿ ಡೈನಾಮೈಟಿನಿಂದ ಕಲ್ಲನ್ನು ಸಿಡಿಸಿ, ಕಲ್ಲಿನ ಚೂರುಗಳನ್ನು ಎತ್ತಿ ಹಾಕಬೇಕು. ನೀರಿನಲ್ಲಿ ಸಿಡಿಮದ್ದನ್ನು ಉಪಯೋಗಿಸುವಾಗ ಬಿಳಿಯ ಬತ್ತಿಯನ್ನು (ವ್ಹೈಟ್ ಫ್ಯೂಸ್ ಕಾಯ್ಲ್) ಬಳಸಬೇಕು. ಹೀಗೆ ಗಟ್ಟಿಯಾದ ಬಂಡೆ ಸಿಕ್ಕುವವರೆಗೂ ಅಗೆತವನ್ನೂ ಮುಂದುವರಿಸಬೇಕು. 

	ಆಮೇಲೆ ಅಸ್ತಿಭಾರವನ್ನು ಶುಭ್ರವಾಗಿ ನೀರಿನ ಹೋಸ್‍ಕೊಳವಿಗಳನ್ನು ಉಪಯೋಗಿಸಿ ತೊಳೆದು ನೀರಿಗೆ ಸಿಮೆಂಟನ್ನು ಕಲಸಿ ಅದನ್ನು ಅಸ್ತಿಭಾರದ ಮೇಲೆ ಎಲ್ಲ ಭಾಗಗಳಲ್ಲಿಯೂ ಎರಚಿ ಅದರ ಮೇಲೆ ಕಾಂಕ್ರೀಟನ್ನು ಹಾಕಬಹುದು. ಸಾಮಾನ್ಯವಾಗಿ ಕೊಂಚ ಸಿಮೆಂಟನ್ನು ಬೆರೆಸಿದ ಸುರ್ಕಿಕಾಂಕ್ರೀಟನ್ನು ಹಾಕಿದರೆ ಸಾಕು. ಕಟ್ಟೆ ಬಹಳ ಎತ್ತರವಾಗಿದ್ದರೆ ಒಂದು ಸಿಮೆಂಟ್, ಎರಡು ಜಲ್ಲಿ, ನಾಲ್ಕು ಮರಳನ್ನು ಬೆರೆಸಿದ ಸಿಮೆಂಟ್ ಕಾಂಕ್ರೀಟನ್ನು ಅಸ್ತಿಭಾರದಲ್ಲಿ ಹಾಕಬೇಕು. ಇಲ್ಲಿಗೆ ಕಟ್ಟೆಯ ಅಸ್ತಿಭಾರ ಮುಗಿದಂತೆ. ಅದರ ಮೇಲೆ ಕಟ್ಟೆಯ ಕಲ್ಲುಗಾರೆಯ ಕೆಲಸವನ್ನು ಪ್ರಾರಂಭಿಸಬಹುದು.
(ಎಚ್.ಸಿ.ಕೆ.)
										(ಪರಿಷ್ಕರಣೆ: ಎಂ.ಜಿ.ಶ್ರೀನಿವಾಸನ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ